ದಿಲ್ಲಿ ಹಿಂಸಾಚಾರ ಪ್ರಚೋದನೆಗೆ ಶರ್ಜೀಲ್ ಇಮಾಮ್‌ನ ಧಾರ್ಮಿಕ ಮತಾಂಧತೆ ಬಳಸಿಕೊಂಡ ಉಮರ್ ಖಾಲಿದ್

Update: 2020-11-25 14:10 GMT

ಹೊಸದಿಲ್ಲಿ, ನ.25: ಜೆಎನ್‌ಯು ವಿದ್ಯಾರ್ಥಿ ಶರ್ಜೀಲ್ ಇಮಾಮ್‌ನ ಧಾರ್ಮಿಕ ಮತಾಂಧತೆ , ಶೈಕ್ಷಣಿಕ ಪರಂಪರೆ ಮತ್ತು ಪ್ರಚಂಡ ಭಾಷಣಕಲೆಯನ್ನು ಉಮರ್ ಖಾಲಿದ್ ದಿಲ್ಲಿಯಲ್ಲಿ ಹಿಂಸಾಚಾರ ಪ್ರಚೋದನೆಗೆ ಬಳಸಿಕೊಂಡಿದ್ದ ಎಂದು ದಿಲ್ಲಿ ಗಲಭೆಗೆ ಸಂಬಂಧಿಸಿ ಪೊಲೀಸರು ರವಿವಾರ ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿರುವ ಪೂರಕ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಜೆಎನ್‌ಯುನ ಹಿಂದಿನ (ಮಾಜಿ) ವಿದ್ಯಾರ್ಥಿ ಉಮರ್ ಖಾಲಿದ್ ಪಾಟ್ನಾದಲ್ಲಿದ್ದುಕೊಂಡೇ ದಿಲ್ಲಿಯಲ್ಲಿ ಹಿಂಸಾಚಾರ ಭುಗಿಲೇಳುವಂತೆ ಸಂಚು ಹೂಡಿದ್ದ. ಪೌರತ್ವ ಕಾಯ್ದೆಯನ್ನು ವಿರೋಧಿಸಿ ಬಿಹಾರದ ನವಾಡದಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಭಾಷಣ ಮಾಡುವಂತೆ ತಾರಿಖ್ ಎಂಬಾತ ಖಾಲಿದ್‌ನನ್ನು ಆಹ್ವಾನಿಸಿದ್ದ. ತಾನು ಪಾಟ್ನಾದಲ್ಲಿದ್ದಾಗ ದಿಲ್ಲಿಯಲ್ಲಿ ಹಿಂಸಾಚಾರ ನಡೆದರೆ, ಒಂದು ವೇಳೆ ಹಿಂಸಾಚಾರದ ಹಿಂದಿನ ಸಂಚು ಬಯಲಾದರೂ ತಾನು ಸುಲಭದಲ್ಲಿ ಪಾರಾಗಬಹುದು ಎಂದು ಖಾಲಿದ್ ಯೋಚಿಸಿದ್ದ. ಇದಕ್ಕೆ ಆತ ಶರ್ಜೀಲ್ ಇಮಾಮ್‌ನನ್ನು ಬಳಸಿಕೊಂಡಿದ್ದ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

ತ್ರಿವಳಿ ತಲಾಖ್ ಅಕ್ರಮ ಎಂಬ ಮಸೂದೆ ಜಾರಿಗೊಂಡದ್ದು, ಬಾಬರಿ ಮಸೀದಿ ಪ್ರಕರಣದಲ್ಲಿ ಹೊರಬಿದ್ದ ಅಂತಿಮ ತೀರ್ಪು, 370ನೇ ವಿಧಿಯ ರದ್ಧತಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಗೆ ಅನುಮೋದನೆ ದೊರಕಿರುವುದು ಧಾರ್ಮಿಕ ಉಗ್ರವಾದಿಗಳ ಅಸಮಾಧಾನ ಹೆಚ್ಚಲು ಕಾರಣವಾಗಿತ್ತು ಎಂದು ದಿಲ್ಲಿ ಪೊಲೀಸರು ರವಿವಾರ ಸಲ್ಲಿಸಿರುವ 200 ಪುಟದ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಮತ್ತು ಫೈಜಾನ್ ಖಾನ್ ಅವರ ವಿರುದ್ಧ ಸಲ್ಲಿಸಿರುವ ಆರೋಪಪಟ್ಟಿಯನ್ನು ನ್ಯಾಯಾಲಯ ಮಂಗಳವಾರ ಸ್ವೀಕರಿಸಿದೆ.

ಟ್ರಂಪ್ ಭೇಟಿ ಸಂದರ್ಭ ಗಲಭೆಗೆ ಸಂಚು

ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಫೆಬ್ರವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭ ಗಲಭೆ ಸೃಷ್ಟಿಸಿ ಭಾರತ ಸರಕಾರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಹುಟ್ಟಿಸಲು ಉಮರ್ ಖಾಲಿದ್ ಯೋಚಿಸಿದ್ದ. ಈ ಸಂದರ್ಭ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಹಾಗೂ ಹಿಂಸಾಚಾರ ನಡೆಸಿದರೆ ಅಂತಾರಾಷ್ಟ್ರೀಯ ಗಮನ ಸೆಳೆಯಲು ಹಾಗೂ ಸರಕಾರದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದ ಒತ್ತಡ ಹೇರಲು ಸುಲಭವಾಗಬಹುದು ಎಂದು ಆತ ಲೆಕ್ಕಾಚಾರ ಹಾಕಿಕೊಂಡಿದ್ದ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News