ಮಾಜಿ ಸಹಾಯಕನಿಗೆ ಕ್ಷಮಾದಾನ ನೀಡಲು ಮುಂದಾಗಿರುವ ಟ್ರಂಪ್

Update: 2020-11-25 16:11 GMT

ವಾಶಿಂಗ್ಟನ್, ನ. 25: ತನ್ನ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕಲ್ ಫ್ಲಿನ್‌ಗೆ ಕ್ಷಮಾದಾನ ನೀಡುವ ಬಗ್ಗೆ ಅವೆುರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಿಶೀಲಿಸುತ್ತಿದ್ದಾರೆ ಎಂದು ಅವೆುರಿಕದ ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.

ಟ್ರಂಪ್‌ರ 2016ರ ಚುನಾವಣಾ ಪ್ರಚಾರ ತಂಡವು ರಶ್ಯದೊಂದಿಗೆ ಹೊಂದಿತ್ತೆನ್ನಲಾದ ಸಂಪರ್ಕಗಳ ಬಗ್ಗೆ ಎಫ್‌ಬಿಐಗೆ ಸುಳ್ಳು ಮಾಹಿತಿ ನೀಡಿರುವುದನ್ನು ಫ್ಲಿನ್ 2017ರಲ್ಲಿ ಒಪ್ಪಿಕೊಂಡಿದ್ದರು.

ತನ್ನ ಅಧ್ಯಕ್ಷೀಯ ಅವಧಿಯ ಕೊನೆಯ ದಿನಗಳಲ್ಲಿ ಹಲವರಿಗೆ ಕ್ಷಮಾದಾನ ನೀಡಲು ಟ್ರಂಪ್ ಬಯಸಿದ್ದು, ಪಟ್ಟಿಯಲ್ಲಿ ಫ್ಲಿನ್‌ರ ಹೆಸರೂ ಇದೆ ಎಂದು ‘ಆ್ಯಕ್ಸಿಯೋಸ್’ ಮತ್ತು ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಗಳು ವರದಿ ಮಾಡಿವೆ.

ಟ್ರಂಪ್ ಅಧಿಕಾರ ವಹಿಸಿಕೊಳ್ಳುವ ಮೊದಲು, 2016ರ ಡಿಸೆಂಬರ್‌ನಲ್ಲಿ ರಶ್ಯದ ಅವೆುರಿಕ ರಾಯಭಾರಿಯೊಂದಿಗೆ ಫ್ಲಿನ್ ನಡೆಸಿದ ರಹಸ್ಯ ಮಾತುಕತೆಗಳ ಬಗ್ಗೆ ವಿಶೇಷ ವಕೀಲ ರಾಬರ್ಟ್ ಮುಲ್ಲರ್ ತನಿಖೆ ನಡೆಸಿದ್ದರು. 2016ರ ಅವೆುರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ನಡೆಸಿತ್ತೆನ್ನಲಾದ ಹಸ್ತಕ್ಷೇಪದ ಬಗ್ಗೆ ಮುಲ್ಲರ್ ತನಿಖೆ ನಡೆಸುತ್ತಿದ್ದರು.

ಕೇವಲ 22 ದಿನಗಳಲ್ಲೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಹುದ್ದೆಯಿಂದ ಫ್ಲಿನ್‌ರನ್ನು ಟ್ರಂಪ್ ವಜಾಗೊಳಿಸಿದ್ದರು. ಆದರೆ, ಈ ತನಿಖೆಯು ‘ರಾಜಕೀಯ ಸಂಚು’ ಎಂಬುದಾಗಿ ಟ್ರಂಪ್ ಪದೇ ಪದೇ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News