ಬೈರೂತ್ ಸ್ಫೋಟ: ಮೂವರು ಸಚಿವರ ವಿಚಾರಣೆಗೆ ಮುಂದಾದ ನ್ಯಾಯಾಧೀಶ

Update: 2020-11-25 16:18 GMT

ಬೈರೂತ್ (ಲೆಬನಾನ್), ನ. 25: ಲೆಬನಾನ್ ದೇಶದ ರಾಜಧಾನಿ ಬೈರೂತ್‌ನ ಬಂದರಿನಲ್ಲಿ ಇತ್ತೀಚೆಗೆ ಸಂಭವಿಸಿದ ಬೃಹತ್ ಸ್ಫೋಟಕ್ಕೆ ಸಂಬಂಧಿಸಿ ಹೊಣೆಗಾರಿಕೆಯನ್ನು ನಿಗದಿಪಡಿಸಲು ಸರಕಾರದ ಮೂವರು ಸಚಿವರನ್ನು ವಿಚಾರಣೆಗೆ ಒಳಪಡಿಸಲು ತನಿಖೆಯ ನೇತೃತ್ವವನ್ನು ವಹಿಸಿರುವ ನ್ಯಾಯಾಧೀಶರು ಬಯಸಿದ್ದಾರೆ ಎಂದು ನ್ಯಾಯಾಂಗ ಮೂಲಗಳು ಮಂಗಳವಾರ ತಿಳಿಸಿವೆ.

ಆಗಸ್ಟ್ 4ರಂದು ನೂರಾರು ಟನ್ ಅಮೋನಿಯಂ ನೈಟ್ರೇಟ್ ಸ್ಫೋಟಿಸಿ 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಸ್ಫೋಟದಿಂದಾಗಿ ರಾಜಧಾನಿಯ ಹೆಚ್ಚಿನ ಭಾಗಗಳು ಹಾನಿಗೀಡಾಗಿವೆ.

ಸ್ಫೋಟದ ಬಳಿಕ ಸರಕಾರ ರಾಜೀನಾಮೆ ನೀಡಿದೆ. ಆದರೆ, ನೂತನ ಸರಕಾರದ ರಚನೆಯಲ್ಲಿ ವಿಳಂಬವಾಗಿರುವುದರಿಂದ ಸರಕಾರದ ಉಸ್ತುವಾರಿಯನ್ನು ಹಿಂದಿನ ಆಡಳಿತವೇ ವಹಿಸಿಕೊಂಡಿದೆ.

ಲೋಕೋಪಯೋಗಿ ಹಾಗೂ ಸಾರಿಗೆ ಸಚಿವ, ಹಣಕಾಸು ಸಚಿವ ಮತ್ತು ಕಾನೂನು ಸಚಿವರನ್ನು ವಿಚಾರಣೆಗೊಳಪಡಿಸಬೇಕಾಗಿದೆ ಎಂದು ನ್ಯಾಯಾಧೀಶ ಫದಿ ಸವನ್ ಸಂಸತ್ತಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News