ರಾಹುಲ್ ಗಾಂಧಿ ಪೂರೈಸಿದ ನೆರೆ ಪರಿಹಾರ ಸಾಮಗ್ರಿ ಪರಿತ್ಯಕ್ತ ಸ್ಥಿತಿಯಲ್ಲಿ ಪತ್ತೆ

Update: 2020-11-25 16:51 GMT
ಫೈಲ್ ಚಿತ್ರ

ಮಲಪ್ಪುರಂ, ನ. 25: ವಯನಾಡಿನ ಸಂಸದ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತನ್ನ ಕ್ಷೇತ್ರಕ್ಕೆ ಪೂರೈಸಿದ್ದ ನೆರೆ ಪರಿಹಾರ ಸಾಮಗ್ರಿಗಳ ಕಿಟ್‌ಗಳು ಇಲ್ಲಿಗೆ ಸಮೀಪದ ನಿಲಂಬೂರಿನ ಅಂಗಡಿಯೊಂದರಲ್ಲಿ ಪರಿತ್ಯಕ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಇಲ್ಲಿನ ನಿವಾಸಿಗಳು ಹಾಗೂ ಎಡ ಪಕ್ಷಗಳು ಸೇರಿದಂತೆ ಹಲವರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕೆಲವರು ಮಂಗಳವಾರ ಇಲ್ಲಿಗೆ ಆಗಮಿಸಿ ಅಂಗಡಿ ಬಾಡಿಗೆ ಪಡೆಯಲು ಯತ್ನಿಸಿದಾಗ ಆಹಾರ ಪ್ಯಾಕೆಟ್, ಬಟ್ಟೆ ಹಾಗೂ ಇತರ ಸಾಮಾಗ್ರಿಗಳನ್ನು ಒಳಗೊಂಡ ಕಿಟ್‌ಗಳು ಪರಿತ್ಯಕ್ತ ಸ್ಥಿತಿಯಲ್ಲಿ ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ಆಡಳಿತಾರೂಢ ಸಿಪಿಐ-ಎಂನ ಯುವ ಘಟಕ ಡಿವೈಎಫ್‌ಐ,  ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸಿತು ಹಾಗೂ ಈ ಬಗ್ಗೆ ಜನರಲ್ಲಿ ಕ್ಷಮೆ ಕೋರುವಂತೆ ಕಾಂಗ್ರೆಸ್ ಅನ್ನು ಆಗ್ರಹಿಸಿತು. ಈ ಬಗ್ಗೆ ತನಿಖೆ ನಡೆಸುವಂತೆ ನಿಲಂಬೂರು ಶಾಸಕ ಬಿ.ವಿ. ಅನ್ವರ್ (ಎಲ್‌ಡಿಎಫ್ ಬೆಂಬಲಿಸಿದ ಸ್ವತಂತ್ರ ಶಾಸಕ) ಜಿಲ್ಲಾಧಿಕಾರಿ ಕೆ. ಗೋಪಾಲಕೃಷ್ಣನ್ ಅವರನ್ನು ಆಗ್ರಹಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬಳಿಕ ಕಾಂಗ್ರೆಸ್ ನಾಯಕರು ವಯನಾಡು ಕ್ಷೇತ್ರದಲ್ಲಿ ಇಂತಹ ದಾಸ್ತಾನನ್ನು ನಾಶಗೊಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ‘‘ನಿಲಂಬೂರಿನಲ್ಲಿ ಮಾತ್ರ ಈ ಕಿಟ್‌ಗಳನ್ನು ದಾಸ್ತಾನು ಮಾಡಿರುವುದಲ್ಲ. ಮುಂಬರುವ ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಮತದಾರರನ್ನು ಪ್ರಭಾವಿಸಲು ಕಾಂಗ್ರೆಸ್ ಇತರ ಹಲವು ಪ್ರದೇಶಗಳಲ್ಲಿ ಕೂಡ ಆಹಾರ ಸಾಮಗ್ರಿಗಳನ್ನು ದಾಸ್ತಾನು ಮಾಡಿದೆ’’ ಎಂದು ಅವರು ಹೇಳಿದ್ದಾರೆ.

‘‘ಜಿಲ್ಲಾಧಿಕಾರಿಯವರು ಈ ಬಗ್ಗೆ ತನಿಖೆ ನಡೆಸಬೇಕು. ಪ್ರಾಕೃತಿಕ ವಿಕೋಪದಿಂದ ತೊಂದರೆಗೀಡಾದ ಜನರಿಗೆ ಈ ಆಹಾರ ಕಿಟ್‌ಗಳನ್ನು ದಾಸ್ತಾನು ಇರಿಸಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕು’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News