ಹುಬ್ಬಳ್ಳಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯ ಹತ್ಯೆ: ಆರೋಪಿ ಮಹಾರಾಷ್ಟ್ರ ಎಟಿಎಸ್ ಬಲೆಗೆ

Update: 2020-11-25 17:12 GMT

ಮುಂಬೈ,ನ.25: ಈ ವರ್ಷದ ಆ.6ರಂದು ಕರ್ನಾಟಕದ ಹುಬ್ಬಳ್ಳಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಇರ್ಫಾನ್ ಹಂಚನಾಳ ಅವರನ್ನು ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣದ ಮುಖ್ಯ ಆರೋಪಿಯನ್ನು ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ಘಟಕ (ಎಟಿಎಸ್)ವು ಮುಂಬೈನಲ್ಲಿ ಬಂಧಿಸಿದೆ.

ಉತ್ತರ ಪ್ರದೇಶದ ಬಲರಾಮಪುರ ನಿವಾಸಿಯಾಗಿರುವ ಗೋಲು ಅಲಿಯಾಸ್ ಅಂಕುರ್ ಸಿಂಗ್ ಅಲಿಯಾಸ್ ಅನೂಪ್ ಸಿಂಗ್(24) ಇರ್ಫಾನ್ ಹತ್ಯೆಯ ಬಳಿಕ ತಲೆಮರೆಸಿಕೊಂಡಿದ್ದ.

ಸಿಂಗ್ ಇರುವಿಕೆಯ ಬಗ್ಗೆ ನಿರ್ದಿಷ್ಟ ಮಾಹಿತಿ ಎಟಿಎಸ್‌ನ ಜುಹು ಘಟಕಕ್ಕೆ ಲಭ್ಯವಾಗಿದ್ದು,ಮಂಗಳವಾರ ಸಂಜೆ ಪೊಲೀಸ್ ಇನ್ಸ್‌ಪೆಕ್ಟರ್ ದಯಾ ನಾಯಕ್ ನೇತೃತ್ವದ ತಂಡವು ಅಂಧೇರಿ ರೈಲು ನಿಲ್ದಾಣದಲ್ಲಿ ಆತನನ್ನು ಬಂಧಿಸಿದೆ ಎಂದು ಎಟಿಎಸ್ ಅಧಿಕಾರಿಯೋರ್ವರು ತಿಳಿಸಿದರು.

ತಾನು ಇರ್ಫಾನ್ ಎದೆಗೆ ಗುಂಡು ಹಾರಿಸಿದ್ದಾಗಿ ಆರೋಪಿಯು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದೂ ಅವರು ತಿಳಿಸಿದರು.

2016ರಲ್ಲಿ ಅಪರಾಧ ಪ್ರಕರಣವೊಂದಲ್ಲಿ ಮುಂಬೈ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಸಿಂಗ್ ಆರ್ಥರ್ ರೋಡ್ ಜೈಲಿನಲ್ಲಿದ್ದಾಗ ಕೆಲವು ಶೂಟರ್‌ಗಳ ಸಂಪರ್ಕಕ್ಕೆ ಬಂದಿದ್ದ. ಜೈಲಿನಿಂದ ಹೊರಬಂದ ಬಳಿಕ ಸಿಂಗ್ ಮತ್ತು ಆತನ ಸಹಚರರು ಇರ್ಫಾನ್ ಹತ್ಯೆಗೆ ‘ಸುಪಾರಿ’ಯನ್ನು ಪಡೆದಿದ್ದರು ಎಂದು ಅಧಿಕಾರಿ ಹೇಳಿದರು.

ಸಿಂಗ್ ಸಹಚರರನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದು,ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಂಗ್ ಬಂಧನದ ಬಗ್ಗೆ ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದರು.

ಸಿಂಗ್ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಇತರ ಯಾವುದೇ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆಯೇ ಎನ್ನುವುದನ್ನು ತಿಳಿದುಕೊಳ್ಳಲು ಎಟಿಎಸ್ ಪ್ರಯತ್ನಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News