ಆಂಧ್ರ ಭೂಹಗರಣ : ಎಫ್‌ಐಆರ್‌ನಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರ ಪುತ್ರಿಯರ ಹೆಸರು

Update: 2020-11-25 17:22 GMT

ಅಮರಾವತಿ, ನ.25: ಆಂಧ್ರಪ್ರದೇಶದಲ್ಲಿ ಕೋಟ್ಯಂತರ ರೂ. ಬೆಲೆಬಾಳುವ ಭೂಮಿಯ ಅಕ್ರಮ ಖರೀದಿ ಪ್ರಕರಣಕ್ಕೆ ಸಂಬಂಧಿಸಿ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯಾಧೀಶ ಎನ್‌.ವಿ. ರಮಣರ ಪುತ್ರಿಯರ ಹೆಸರಿದೆ ಎಂದು ಮೂಲಗಳು ಹೇಳಿವೆ. 

ಗುಂಟೂರಿನ ಭ್ರಷ್ಟಾಚಾರ ನಿಗ್ರಹ ದಳದ ಪ್ರಧಾನ ನಿರ್ದೇಶಕರ ಕಚೇರಿಯಲ್ಲಿ ಬುಧವಾರ ಸಲ್ಲಿಸಿರುವ ಎಫ್‌ಐಆರ್‌ನಲ್ಲಿ ನ್ಯಾಯಾಧೀಶ ರಮಣರ ಪುತ್ರಿಯರಾದ ನುತಲಪಟ್ಟಿ ಶ್ರೀತನುಜಾ ಮತ್ತು ನುತಲಪಟ್ಟಿ ಶ್ರೀಭುವನಾರ ಹೆಸರು ಕ್ರಮವಾಗಿ 10 ಮತ್ತು 11ನೇ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ. ಎನ್. ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಟಾರ್ನಿ ಜನರಲ್ ಆಗಿದ್ದ ದಮ್ಮಲಪಟ್ಟಿ ಶ್ರೀನಿವಾಸ್ ತನ್ನ ಪ್ರಭಾವ ಬಳಸಿ, ಅಮರಾವತಿ ನಗರವನ್ನು ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸುವ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ಬಳಿಕ ಯೋಜನೆಯಡಿ ಬರುವ ಜಮೀನನ್ನು ಬೇನಾಮಿ ಹೆಸರಿನಲ್ಲಿ ಖರೀದಿಸುತ್ತಿದ್ದರು ಎಂದು ನ್ಯಾಯವಾದಿ ಕೋಮಟ್ಲ ಶ್ರೀನಿವಾಸ ಸ್ವಾಮಿ ರೆಡ್ಡಿ ಎಂಬವರು ದೂರು ನೀಡಿದ್ದರು.

ಯೋಜನೆಯ ಬಗ್ಗೆ ಸುದ್ಧಿ ಪ್ರಸಾರವಾದೊಡನೆ ಯೋಜನೆಯ ವ್ಯಾಪ್ತಿಗೆ ಬರುವ ಜಮೀನಿನ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗೆ ಕಡಿಮೆ ಬೆಲೆಗೆ ಖರೀದಿಸಿದ ಭೂಮಿಯನ್ನು ಭಾರೀ ಬೆಲೆಗೆ ಮಾರಾಟ ಮಾಡಲಾಗಿದೆ ಎಂದು ಅರ್ಜಿದಾರರು ದೂರು ನೀಡಿದ್ದರು. ಈ ಹಗರಣದಲ್ಲಿ ನುತಲಪಟ್ಟಿ ಶ್ರೀತನುಜಾ ಮತ್ತು ನುತಲಪಟ್ಟಿ ಶ್ರೀಭುವನಾರ ಸಹಿತ ಹಲವು ಪ್ರಭಾವೀ ವ್ಯಕ್ತಿಗಳೂ ಸೇರಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News