ಭಯೋತ್ಪಾದನೆ ಪ್ರಕರಣ ಪಿಡಿಪಿಯ ಯುವ ಘಟಕದ ನಾಯಕ ವಹೀದ್ ಪರ್ರಾ ಬಂಧನ

Update: 2020-11-25 17:53 GMT
photo:  Waheed Parra/Twitter.

ಜಮ್ಮುಕಾಶ್ಮೀರ, ನ. 25: ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿ ಪಿಡಿಪಿಯ ಯುವ ಘಟಕದ ಅಧ್ಯಕ್ಷ ವಹೀದ್ ಪರ್ರಾ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಬಂಧಿಸಿದೆ.

ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಗೆ ಇತ್ತೀಚೆಗೆ ನಾಮಪತ್ರ ಸಲ್ಲಿಸಿದ್ದ ಪರ್ರಾ ಅವರನ್ನು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯೊಂದಿಗೆ ಭಾಗಿಯಾದ ಆರೋಪದಲ್ಲಿ ಎನ್‌ಐಎ ಸೋಮವಾರದಿಂದ ಅವರನ್ನು ವಿಚಾರಣೆ ನಡೆಸುತ್ತಿದೆ. ದಕ್ಷಿಣ ಕಾಶ್ಮೀರದಲ್ಲಿ ಮುಖ್ಯವಾಗಿ ಭಯೋತ್ಪಾದನೆ ಪೀಡಿತ ಪುಲ್ವಾಮಾದಲ್ಲಿ ಪಿಡಿಪಿಯ ಪುನರುಜ್ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪರ್ರಾ ಅವರ ಹೆಸರು ಅಮಾನತುಗೊಂಡ ಪೊಲೀಸ್ ಉಪ ಅಧೀಕ್ಷಕ ದವೀಂದರ್ ಸಿಂಗ್ ಪ್ರಕರಣದ ತನಿಖೆ ಸಂದರ್ಭ ಬೆಳಕಿಗೆ ಬಂದಿತ್ತು. ‘‘ಇಂದು ಪಿಡಿಪಿಯ ಯುವ ಘಟಕದ ನಾಯಕ ಪರ್ರಾನನ್ನು ಎನ್‌ಐಎ ಬಂಧಿಸಿದೆ. ಇತರ ಆರೋಪಿಗಳೊಂದಿಗೆ ಸೇರಿ ಹಿಜ್ಬುಲ್ ಮುಜಾಹಿದ್ದೀನ್‌ನ ಪಿತೂರಿಗೆ ಬೆಂಬಲ ನೀಡಿದ ನವೀದ್ ಬಾಬು-ದವೀಂದರ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಬಂಧಿಸಲಾಗಿದೆ’’ ಎಂದು ಎನ್‌ಐಎ ವಕ್ತಾರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News