ಬಿಜೆಪಿ ಮಂಗಳೂರು ನಗರ ದಕ್ಷಿಣದಿಂದ ಪ್ರಶಿಕ್ಷಣ ವರ್ಗಕ್ಕೆ ಚಾಲನೆ

Update: 2020-11-26 06:29 GMT

ಮಂಗಳೂರು, ನ.26: ಭಾರತೀಯ ಜನತಾ ಪಾರ್ಟಿ ಇಂದು ಬಲಿಷ್ಠ ಪಕ್ಷವಾಗಿ ಬೆಳಿದಿದೆ ಎಂದರೆ ಇದರ ಹಿಂದೆ ಪಕ್ಷದ ಹಿರಿಯರ ಅವಿರತ ಪರಿಶ್ರಮವಿದೆ. ಇದನ್ನು ನಾವೆಂದೂ ಮರೆಯಬಾರದು. ಪಕ್ಷ ಸಂಘಟನೆಗೆ ಪ್ರತಿಯೊಬ್ಬ ಕಾರ್ಯಕರ್ತ ವಿಶೇಷ ಒತ್ತು ನೀಡಬೇಕು ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದ್ದಾರೆ.

ಬಿಜೆಪಿ ಮಂಗಳೂರು ನಗರ ದಕ್ಷಿಣದ ವತಿಯಿಂದ ಗುರುವಾರ ಇಲ್ಲಿನ ಮಣ್ಣಗುಡ್ಡೆ ಪ್ರತಾಪನಗರದಲ್ಲಿರುವ ಸಂಘ ನಿಕೇತನದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ಪ್ರಶಿಕ್ಷಣ ವರ್ಗಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ದೇಶ ಭಕ್ತ ಸಂಘಟನೆಯಾಗಿ ಜನಸಂಘ ಬೆಳೆದು ಬಂದಿತ್ತು. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ, ಶ್ಯಾಮಪ್ರಸಾದ್ ಮುಖರ್ಜಿ ಸೇರಿದಂತೆ ಹಲವಾರು ಮಂದಿ ತಮ್ಮ ಜೀವನವನ್ನೇ ಪಕ್ಷಕ್ಕಾಗಿ ಮುಡಿಪಾಗಿಟ್ಟಿದ್ದರು. ಮನೆ ಮನೆ ಸಂಪರ್ಕ ಅಭಿಯಾನದ ಮೂಲಕ ಪಕ್ಷ ಸಂಘಟನೆಯ ಕೆಲಸ ಮಾಡಿದ್ದರು. ಸೈದ್ಧಾಂತಿಕವಾಗಿ ಬೆಳೆದು ಬಂದ ಭಾರತೀಯ ಜನತಾ ಪಾರ್ಟಿಯನ್ನು ಕಾರ್ಯಕರ್ತರು ಇನ್ನಷ್ಟು ಬಲಿಷ್ಠವಾಗಿಸಬೇಕು. ಒಂದಾಗಿ ಮತ್ತು ಒಗ್ಗಟ್ಟಾಗಿ ಪಕ್ಷವನ್ನು ಬೆಳೆಸುವ ಉದ್ದೇಶ ಈ ಪ್ರಶಿಕ್ಷಣ ವರ್ಗದ ಹಿಂದಿದೆ ಎಂದು ಶಾಸಕರು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮೇಯರ್ ದಿವಾಕರ ಪಾಂಡೇಶ್ವರ, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಪ್ರಶಿಕ್ಷಣ ವರ್ಗದ ಸಂಚಾಲಕ ಭಾಸ್ಕರಚಂದ್ರ ಶೆಟ್ಟಿ, ಪ್ರಶಿಕ್ಷಣ ರಾಜ್ಯ ಪ್ಕಕೋಷ್ಠದ ಸದಸ್ಯೆ ಮಂಜುಳಾ, ಮಂಡಲ ಉಪಾಧ್ಯಕ್ಷ ರಮೇಶ್ ಕಂಡೆಟ್ಟು, ಕಾರ್ಪೊರೇಟರ್ ಸುಧೀರ್ ಶೆಟ್ಟಿ, ರೂಪಾ ಡಿ. ಬಂಗೇರ ಉಪಸ್ಥಿತರಿದ್ದರು.

ಬಿಜೆಪಿ ದಕ್ಷಿಣ ಮಂಡಲದ ಅಧ್ಯಕ್ಷ ವಿಜಯ ಕುಮಾರ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೆ. ವಂದಿಸಿದರು. ಲಲ್ಲೇಶ್ ಅತ್ತಾವರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News