ಮಂಗಳೂರು: ಸಾರ್ವತ್ರಿಕ ಮುಷ್ಕರದ ಪ್ರಯುಕ್ತ ಕಾರ್ಮಿಕ ಸಂಘಟನೆಳಿಂದ ಪ್ರತಿಭಟನೆ

Update: 2020-11-26 06:49 GMT

ಮಂಗಳೂರು, ನ. 26: ಈಗಾಗಲೇ ಅಸ್ತಿತ್ವದಲ್ಲಿರುವ ರಸ್ತೆಗಳಿಗೆ ಮರು ನಾಮಕರಣ ಮಾಡಲು ಸಮಯ ಇರುವ ಜನಪ್ರತಿನಿಧಿಗಳಿಗೆ ಜಿಲ್ಲೆಯ ಅಸ್ಮಿತೆಯ ಭಾಗವಾಗಿದ್ದ ವಿಜಯಾ ಬ್ಯಾಂಕ್ ಸೇರಿದಂತೆ ಬ್ಯಾಂಕ್‌ಗಳ ವಿಲೀನದ ಬಗ್ಗೆ ಧ್ವನಿ ಎತ್ತಲು ಸಾಧ್ಯವಾಗದಿರುವುದು ನಮ್ಮ ದುರಂತ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಯೂನಿಯನ್‌ನ ಜಿಲ್ಲಾ ಮುಖಂಡ ವಿನ್ಸೆಂಟ್ ಡಿಸೋಜ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯ ದ.ಕ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಂಗಳೂರಿನ ಮಿನಿ ವಿಧಾನ ಸೌಧದ ಎದುರು ಆಯೋಜಿಸಿದ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಪ್ರತಿಷ್ಠಿತ ಬ್ಯಾಂಕ್‌ಗಳನ್ನು ಅನುತ್ಪಾದಕ ಆಸ್ತಿ ಹೊಂದಿರುವವರಿಗೆ ಹಸ್ತಾಂತರಿಸಲಾಗುತ್ತಿದೆ. ಸಾರ್ವಜನಿಕ ವಲಯದ 29 ಬ್ಯಾಂಕ್‌ಗಳನ್ನು ಈಗಾಗಲೇ ವಿಲೀನ, ಖಾಸಗೀಕರಣ ನೆಪದಲ್ಲಿ 12ಕ್ಕೆ ಇಳಿಸಲಾಗಿದೆ. ಇಲ್ಲಿ ಇಳಿಕೆಯಾಗಿರುವ ಸಂಖ್ಯೆ ಅಲ್ಲ. ಆದರೆ ಅದರಿಂದಾಗಿ ಗ್ರಾಮಾಂತರ ಪ್ರದೇಶ ಸೇರಿದಂತೆ ಸಾಕಷ್ಟು ಶಾಖೆಗಳು ಮುಚ್ಚುತ್ತಿರುವುದರಿಂದ ಜನಸಾಮಾನ್ಯರಿಗೆ ತೊಂದರೆ ಆಗಲಿದೆ. ಹೀಗೇ ಮುಂದುವರಿದಲ್ಲಿ ದೇಶದಲ್ಲಿ 1969ಕ್ಕಿಂತ ಮೊದಲು ಇದ್ದ ಬ್ಯಾಂಕಿಂಗ್ ಪರಿಸ್ಥಿತಿ ಎದುರಾಗಲಿದೆ. ಖಾಸಗಿ ಬ್ಯಾಂಕ್‌ಗಳ ಹಿತಾಸಕ್ತಿ ಕಾಪಾಡುವ ಈ ಖಾಸಗೀಕರಣ, ವಿಲೀನೀಕರಣದ ವಿರುದ್ಧ ಐಕ್ಯ ಹೋರಾಟ ಅಗತ್ಯವಾಗಿದೆ ಎಂದು ಅವರು ಹೇಳಿದರು.

ಸಿಐಟಿಯು ಮುಖಂಡ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಕನಿಷ್ಠ ಕೂಲಿಗಾಗಿ ಹಲವಾರು ಸಮಯದಿಂದ ಹೋರಾಟ ನಡೆಸಲಾಗುತ್ತಿದ್ದರೂ, ಇಂದಿಗೂ ಗುತ್ತಿಗೆ ಕಾರ್ಮಿಕರು ಮಾಸಿಕ ಸುಮಾರು 7000 ರೂ.ಗಳಿಗೂ ಕಡಿಮೆ ವೇತನದಲ್ಲಿ ದುಡಿಯುವ ಪರಿಸ್ಥಿತಿ ಇದೆ.ಸಾರ್ವಜನಿಕ ಉದ್ದಿಮೆಗಳನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಒಪ್ಪಿಸಲಾಗುತ್ತಿದೆ. ಕೊರೋನ ಹೆಸರಿನಲ್ಲಿ ಲಾಕ್‌ಡೌನ್ ಹೇರಿ ಜನರನ್ನು ಮನೆಯಲ್ಲಿರಿಸಿ ಕೇಂದ್ರ ಸರಕಾರ ಕಾರ್ಮಿಕ, ರೈತ, ದಲಿತ ವಿರೋಧಿ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ಪ್ರಯತ್ನ ನಡೆಸಿದೆ ಎಂದು ಆರೋಪಿಸಿದರು.

ಸಂಕಷ್ಟ ಸಮಯದಲ್ಲಿ ದುಡಿಯುವ ವರ್ಗ, ಕಾರ್ಮಿಕ, ರೈತ ವರ್ಗದ ಹಿತ ಕಾಯಬೇಕಾದ ಸರಕಾರ ಅದಾನಿ, ಅಂಬಾನಿಯಂತಹ ಕಾರ್ಪೊರೇಟ್, ಬಂಡವಾಳಶಾಹಿಗಳ ಹಿತವನ್ನು ಕಾಯುತ್ತಿದೆ. ನರೇಂದ್ರ ಮೋದಿ ಸರಕಾರ ಆಡಳಿತಕ್ಕೆ ಬಂದ ಬಳಿಕ ದೇಶದಲ್ಲಿ ಖಾಸಗೀಕರಣಗೊಳ್ಳದ ಕ್ಷೇತ್ರವಿಲ್ಲ ಎಂಬಂತಾಗಿದೆ ಎಂದು ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಎಐಟಿಯುಸಿನ ಸೀತಾರಾಮ ಬೇರಿಂಜ ಮಾತನಾಡಿ, ಅಂದು ಪ್ರಧಾನಿ ನರೇಂದ್ರ ಮೋದಿ ಪಾರ್ಲಿಮೆಂಟ್‌ನ ಮೆಟ್ಟಿಲುಗಳಿಗೆ ನಮಸ್ಕಾರ ಮಾಡಿದಾಗ ಅವರು ಮುಂದೊಂದು ದಿನ ದೇಶವನ್ನೇ ಮಾರಲು ಮುಂದಾಗಬಹುದು ಎಂಬ ಆಲೋಚನೆ ಇರಲಿಲ್ಲ. ನಾವು ವೌನವಾಗಿದ್ದ ಪರಿಣಾಮವಾಗಿ, ಇದು ಸಾಧ್ಯವಾಗಿದ್ದು, ಇದೀಗ ಐಕ್ಯ ಹೋರಾಟದ ಮೂಲಕ ಸರಕಾರದ ತಪ್ಪು ನೀತಿಗಳ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದರು.

ನ್ಯಾಯವಾದಿ ದಿನಕರ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ 2000 ರೂ.ಗೆ ಮರಳು ಒದಗಿಸುವುದಾಗಿ ಹೇಳಿರುವ ಸಂಸದರ ಪತ್ತೆಯೇ ಇಲ್ಲ ಎಂದು ಕುಟುಕಿದರು. ರಸ್ತೆಗಳಿಗೆ ಹೆಸರಿಡುವ ಬಗ್ಗೆ ಆಸಕ್ತಿ ವಹಿಸುವ ಜನಪ್ರತಿನಿಧಿಗಳು ಕಾರ್ಮಿಕರ, ದುಡಿಯುವ ವರ್ಗದ ಬಗ್ಗೆ ಮಾತನಾಡುತ್ತಿಲ್ಲ. ಮೊದಲು ಅವರಿಗೆ ನ್ಯಾಯ ಕೊಡಿ ಮತ್ತೆ ನಿಮ್ಮದೇ ಹೆಸರನ್ನು ಬೇಕಾದರೂ ಇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ವಿವಿಧ ಕಾರ್ಮಿಕ ಹಾಗೂ ಜನಪರ ಸಂಘಟನೆಗಳ ಮುಖಂಡರು ಮಾತನಾಡಿದರು. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ವಸಂತ ಆಚಾರಿ, ಮುಹಮ್ಮದ್ ರಫೀಕ್, ಎಚ್.ವಿ.ರಾವ್, ರವಿಕಿರಣ ಪುಣಚ, ಮುನೀರ್ ಕಾಟಿಪಳ್ಳ, ವಾಸುದೇವ ಉಚ್ಚಿಲ್, ರಾಘವ, ಬಿ.ಎಂ.ಮಾಧವ, ಬಿ.ಎನ್. ದೇವಾಡಿಗ, ಚಿತ್ತರಂಜನ್ ಶೆಟ್ಟಿ, ಮನೋಹರ್ ಶೆಟ್ಟಿ, ಬಿ.ಕೆ. ಇಮ್ತಿಯಾಝ್, ಸಂತೋಷ್ ಕುಮಾರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News