ಹಾಜಿ ಕಾರ್ಕಳ ಶೇಖ್ ಶಾಬು ಸಾಹೇಬ್ ಮೆಮೋರಿಯಲ್ ಟ್ರಸ್ಟ್ ಉದ್ಘಾಟನೆ

Update: 2020-11-26 08:14 GMT

ಮಂಗಳೂರು, ನ.26: ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಅಲ್‌ಹಾಜ್ ಕೆಎಸ್.ಮುಹಮ್ಮದ್ ಮಸೂದ್ ಅವರ ತಂದೆಯ ಹೆಸರಿನಲ್ಲಿ ಸ್ಥಾಪಿಸಲಾದ ‘ಹಾಜಿ ಕಾರ್ಕಳ ಶೇಖ್ ಶಾಬು ಸಾಹೇಬ್ ಮೆಮೋರಿಯಲ್ ಟ್ರಸ್ಟ್’ನ ಉದ್ಘಾಟನೆ ಕಾರ್ಯಕ್ರಮವು ಗುರುವಾರ ನಗರದ ಕುದ್ರೋಳಿಯಲ್ಲಿರುವ ಮುಹಮ್ಮದ್ ಮಸೂದ್ ಅವರ ಸ್ವಗೃಹದಲ್ಲಿ ನಡೆಯಿತು.

‘ವಾರ್ತಾಭಾರತಿ’ಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಬ್ರೋಷರ್ ಅನಾವರಣಗೊಳಿಸುವ ಮೂಲಕ ಟ್ರಸ್ಟ್ ಅನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬಡಬಗ್ಗರ ಸೇವೆ ಮಾಡುವುದೇ ಅಲ್ಲಾಹನ ಸೇವೆ ಮಾಡುವುದಾಗಿದೆ. ಕ್ಷಣಿಕ ಬದುಕಿನಲ್ಲಿ ನಾಳೆಗೆ ಏನು ಕೂಡಿಡುವುದು ಎಂಬುದಕ್ಕಿಂತಲೂ ಪರಲೋಕ ಸುಖಕ್ಕಾಗಿ ಏನು ಮಾಡಬೇಕು ಎಂಬುದು ಮುಖ್ಯವಾಗುತ್ತದೆ. ಕೆ.ಎಸ್.ಮುಹಮ್ಮದ್ ಮಸೂದ್ ಅವರು ತನ್ನ ತಂದೆಯ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸುವ ಮೂಲಕ ಪರಲೋಕಕ್ಕೆ ಪುಣ್ಯ ಸಂಪಾದಿಸಿ ಯುವ ಸಮೂಹಕ್ಕೂ ಸ್ಫೂರ್ತಿಯಾಗಿದ್ದಾರೆ. ಈ ಟ್ರಸ್ಟ್ ತನ್ನ ಧ್ಯೇಯೋದ್ದೇಶ ಈಡೇರಿಸಲಿ ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಅಲ್‌ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಮಾತನಾಡಿ, ‘ನನ್ನ ತಂದೆ ಬ್ರಿಟಿಷರ ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯ ತಹಶೀಲ್ದಾರ್ ಸ್ಥಾನಕ್ಕೆ ಸಮಾನವಾದ ಹುದ್ದೆಯಲ್ಲಿದ್ದರು. ವೈಭವಯುತ ಬದುಕಾದರೂ ಕೂಡ ಧರ್ಮಪ್ರಜ್ಞೆಯುಳ್ಳವರಾಗಿದ್ದರು. ಒಬ್ಬ ತಂದೆ ತನ್ನ ಮಕ್ಕಳಿಗಾಗಿ ಏನು ಮಾಡಬೇಕಿತ್ತೋ ಆ ಕರ್ತವ್ಯವನ್ನು ಅವರು ಪೂರೈಸಿದ್ದರು. ಹಾಗೇ ಮಕ್ಕಳಾದ ನಾವು ಅವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಸಮಾಜದ, ಸಮುದಾಯದ ಹೆಣ್ಮಕ್ಕಳ ಕಣ್ಣೀರು ಮತ್ತು ಅಸಹಾಯಕರಿಗೆ ನೆರವು ನೀಡಲು ಮುಂದಾಗಿದ್ದೇವೆ. ಹಾಗಂತ ನಾವು ಸಮಾಜ ಸೇವೆಗಿಳಿಯುವುದು ಇದು ಮೊದಲೇನಲ್ಲ. ಈ ಹಿಂದೆಯೂ ವೈಯಕ್ತಿಕವಾಗಿ ಸಮಾಜದ ಜನರಿಗೆ ಅನೇಕ ರೀತಿಯಲ್ಲಿ ನೆರವು ನೀಡುತ್ತಿದ್ದೆವು. ಇನ್ನು ಮುಂದೆ ಕರಾರುವಕ್ಕಾಗಿ ಟ್ರಸ್ಟ್ ಮೂಲಕ ಇನ್ನಷ್ಟು ಸಮಾಸ ಸೇವೆ ಮಾಡಲಿದ್ದೇವೆ ಎಂದರು.

ಮುಹಮ್ಮದ್ ಮಸೂದ್ ಅವರ ಸಹೋದರರಾದ ಕೆ.ಎಸ್.ಫಝಲ್ ರಹ್ಮಾನ್, ಕೆ.ಎಸ್.ಇಮ್ತಿಯಾಝ್ ಅಹ್ಮದ್, ಉದ್ಯಮಿಗಳಾದ ಮೊಹ್ತೆಶ್ಯಾಮ್‌ನ ಎಸ್.ಎಂ.ಅರ್ಷದ್, ಇನ್‌ಲ್ಯಾಂಡ್ ಬಿಲ್ಡರ್‌ನ ಸಿರಾಜ್ ಅಹ್ಮದ್, ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ, ಉಪಾಧ್ಯಕ್ಷ ಸಿ. ಪುತ್ತುಬಾವ ಹಾಜಿ, ಶೇಖ್ ಬಾಷಾ ಸಾಹೇಬ್ ಕುಂದಾಪುರ, ಬಿಸಿಸಿಐ ಅಧ್ಯಕ್ಷ ಎಸ್.‌ಎಂ.ರಶೀದ್ ಹಾಜಿ ಮತ್ತಿತರರು ಉಪಸ್ಥಿತರಿದ್ದು, ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಪ್ರಥಮ ಸೇವೆಯಾಗಿ ಹೆಣ್ಣು ಮಗಳ ಮದುವೆಗೆ ಧನಸಹಾಯದ ಚೆಕ್ ಹಸ್ತಾಂತರಿಸಲಾಯಿತು.

ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಹಾಜಿ ಕೆ.ಎಸ್.ಮುಹಮ್ಮದ್ ಆರಿಫ್ ಸ್ವಾಗತಿಸಿದರು. ಕವಿ ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News