ಶ್ವಾಸಕೋಶ ಕಸಿಗೆ ಅಡ್ಡಿಯಾದ ಚಂಡಮಾರುತ:ಯುವ ವೈದ್ಯ ಕೋವಿಡ್ ಸೋಂಕಿಗೆ ಬಲಿ

Update: 2020-11-26 09:22 GMT

ಭೋಪಾಲ್ :  ಕಳೆದೊಂದು ತಿಂಗಳಿನಿಂದ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಯುವ ವೈದ್ಯರೊಬ್ಬರಿಗೆ ಸೂಕ್ತ ಸಮಯದಲ್ಲಿ ಶ್ವಾಸಕೋಶ ಕಸಿ ನಡೆಸಲು ಸಾಧ್ಯವಾಗದೆ ಅವರು ಬುಧವಾರ ಕೊನೆಯುಸಿರೆಳೆದಿದ್ದಾರೆ. ಅವರನ್ನು ಶ್ವಾಸಕೋಶದ ಕಸಿ ಶಸ್ತ್ರಚಿಕಿತ್ಸೆಗಾಗಿ ಚೆನ್ನೈಗೆ ಏರ್ ಅಂಬ್ಯುಲೆನ್ಸ್‍ನಲ್ಲಿ ಸಾಗಿಸಲು ನಿರ್ಧರಿಸಲಾಗಿತ್ತು, ಆದರೆ ನಿವಾರ್ ಚಂಡಮಾರುತದಿಂದಾಗಿ ವಿಮಾನ ಹಾರಾಟ  ಸಾಧ್ಯವಾಗಿಲ್ಲ.

ಮೂವತ್ತು ವರ್ಷದ  ಡಾ ಶುಭಂ ಉಪಾಧ್ಯಾಯ ಅವರ ಶ್ವಾಸಕೋಶವು ಸೋಂಕಿನಿಂದ ತೀವ್ರ ಬಾಧಿತವಾಗಿತ್ತು. ಬುಂದೇಲ್‍ಖಂಡ್ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಅವರಿಗೆ ಅಕ್ಟೋಬರ್ 28ರಂದು ಸೋಂಕು ದೃಢಪಟ್ಟಿತ್ತು. ಆದರೆ ನವೆಂಬರ್ 10ರಂದು ಅವರ ಸ್ಥಿತಿ ವಿಷಮಿಸಿದ ಹಿನ್ನೆಲೆಯಲ್ಲಿ ಅವರನ್ನು ಭೋಪಾಲ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈರಸ್ ಸೋಂಕಿನಿಂದ ಅವರ ಶೇ 30ರಷ್ಟು ಶ್ವಾಸಕೋಶ ಬಾಧಿತವಾಗಿದ್ದರಿಂದ ಅವರನ್ನು ಉಳಿಸಲು ಶ್ವಾಸಕೋಶದ ಕಸಿ ನಡೆಸುವುದೊಂದೇ  ಮಾರ್ಗವಾಗಿತ್ತು ಆದರೆ ಚಂಡಮಾರುತದಿಂದಾಗಿ ಅವರನ್ನು ಚೆನ್ನೈಗೆ ಏರ್ ಅಂಬ್ಯುಲೆನ್ಸ್‍ನಲ್ಲಿ ಕರೆದೊಯ್ಯುವುದು ಸಾಧ್ಯವಾಗಿಲ್ಲ, ಎಂದು ಚಿರಾಯು ಆಸ್ಪತ್ರೆಯ ಡಾ ಅಜಯ್ ಗೋಯೆಂಕ ಹೇಳಿದ್ದಾರೆ.

ಕೋವಿಡ್ ವಾರಿಯರ್ ಆಗಿದ್ದ ಡಾ ಶುಭಂ ಅವರ ಸ್ಥಿತಿ ಕುರಿತು  ರಾಜ್ಯ ಸಚಿವ ಗೋಪಾಲ್ ಭಾರ್ಗವ ಮಾಹಿತಿ ನೀಡಿದ ನಂತರ ಅವರ ಚಿಕಿತ್ಸೆಗೆ ಅಗತ್ಯವಿರುವ ಹಣಕಾಸು ಮಂಜೂರುಗೊಳಿಸುವಂತೆ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಸೂಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News