ಉಡುಪಿ ಜಿಲ್ಲೆಯ ಬೀಚ್‌ಗಳಲ್ಲಿ ನೀಲಿ ಬೆಳಕು ವೀಕ್ಷಣೆಗೆ ಜನಜಾತ್ರೆ !

Update: 2020-11-26 14:35 GMT

ಉಡುಪಿ, ನ. 26: ಸೂಕ್ಷ್ಮಜೀವಿಯೊಂದರ ಸಂಖ್ಯೆ ವಿಪರೀತ ಹೆಚ್ಚಾಗಿರುವ ಪರಿಣಾಮ ರಾತ್ರಿ ವೇಳೆ ನೀಲಿಬಣ್ಣದ ಬೆಳಕಿನೊಂದಿಗೆ ಹೊಳೆಯುವ ಉಡುಪಿ ಜಿಲ್ಲೆಯ ಸಮುದ್ರ ತೀರಗಳನ್ನು ವೀಕ್ಷಿಸಲು ಜನ ತಂಡೋಪತಂಡವಾಗಿ ಬೀಚ್‌ಗಳಿಗೆ ಆಗಮಿಸುತ್ತಿದ್ದು, ಇದರಿಂದ ಮಧ್ಯರಾತ್ರಿವರೆಗೂ ಕಡಲ ಕಿನಾರೆ ಗಳಲ್ಲಿ ಜನಜಾತ್ರೆಯೇ ಕಂಡುಬರುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ನೀಲಿಬಣ್ಣದಿಂದ ಹೊಳೆಯುವ ಸಮುದ್ರದ ಅಲೆಗಳ ವಿಡಿಯೋಗಳನ್ನು ವೀಕ್ಷಿಸಿದ ಜನ, ಅದನ್ನು ಕಣ್ಣಾರೆ ಕಾಣಲು ಸಮುದ್ರ ತೀರಕ್ಕೆ ದೌಡಾಯಿಸುತ್ತಿದ್ದಾರೆ. ಅದಕ್ಕಾಗಿ ಸಂಜೆ ಯಿಂದ ಮಧ್ಯರಾತ್ರಿ 12 ಗಂಟೆ ನಂತರವೂ ಜನ ಬೀಚ್‌ಗಳಲ್ಲಿ ಸೇರುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ರಾತ್ರಿ ವೇಳೆ ಕಟಪಾಡಿ ಮಟ್ಟುವಿನಿಂದ ಮಲ್ಪೆ ಪಡುಕೆರೆವರೆಗಿನ ಸುಮಾರು 10ಕಿ.ಮೀ. ದೂರದ ಬೀಚ್ ಜನ ಜಂಗುಳಿ ಯಿಂದ ತುಂಬಿ ಹೋಗಿದೆ. ಎಲ್ಲೆಂದರಲ್ಲಿ ಜನ ಕಾರು, ದ್ವಿಚಕ್ರ ವಾಹನಗಳಲ್ಲಿ ಆಗಮಿಸಿ ಸಮುದ್ರವನ್ನು ವೀಕ್ಷಿಸುವ ದೃಶ್ಯ ಕಂಡು ಬರುತ್ತಿದೆ. ಕೆಲವರು ಸಮುದ್ರ ತೀರದಲ್ಲಿ ನಿಂತು ನೀಲಿಬಣ್ಣದಿಂದ ಹೊಳೆಯುವ ಅಲೆಗಳನ್ನು ತಮ್ಮ ಮೊಬೈಲ್ ಹಾಗೂ ಕ್ಯಾಮೆರಾಗಳಲ್ಲಿ ಸೆರೆಹಿಡಿಯುತ್ತಿದ್ದಾರೆ.

ಕೆಲವೊಂದು ಸಿಮೀತ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತಿರುವ ಈ ಅಚ್ಚರಿಯ ಬೆಳವಣಿಗೆಯನ್ನು ಕೆಲವರು ನೋಡಲು ಸಾಧ್ಯವಾಗದೆ ನಿರಾಸೆ ಯಿಂದ ಮರಳುತ್ತಿದ್ದಾರೆ. ವಾಹನ ದಟ್ಟಣೆ ಹೆಚ್ಚಾದ ಪರಿಣಾಮ ಬೀಚ್ ರಸ್ತೆಯಲ್ಲಿ ಪ್ರತಿದಿನ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಅದೇ ರೀತಿ ಜಿಲ್ಲೆಯ ಗಂಗೊಳ್ಳಿ, ಬೈಂದೂರು, ಪಡುಬಿದ್ರೆ ಸೇರಿದಂತೆ ಹಲವು ಬೀಚ್‌ಗಳಲ್ಲೂ ನೂರಾರು ಸಂಖ್ಯೆಯ ಜನ ನೀಲಿ ಸಮುದ್ರ ವೀಕ್ಷಣೆಗಾಗಿ ಸೇರುತ್ತಿರುವುದು ವರದಿಯಾಗಿದೆ. ಈ ಪ್ರಕೃತಿ ವಿಸ್ಮಯ ವೀಕ್ಷಿಸಲು ಜಿಲ್ಲೆಯ ಜನರು ಮಾತ್ರವಲ್ಲದೆ ಹೊರ ಜಿಲ್ಲೆಯವರು ಕೂಡ ಇದೀಗ ಉಡುಪಿಯತ್ತ ಬರುತ್ತಿದ್ದಾರೆ.

''ನಾವು ಪ್ರತಿದಿನ ನೀಲಿ ಬೆಳಕು ವೀಕ್ಷಣೆಗಾಗಿ ಮಲ್ಪೆ ಪಡುಕೆರೆ ಬೀಚ್‌ಗೆ ಬರುತ್ತಿದ್ದೇವೆ. ಎಲ್ಲ ಕಡೆ ಜನ ಜಾತ್ರೆಯೇ ಸೇರುತ್ತಿದ್ದಾರೆ. ನಸುಕಿನ ವೇಳೆ 2ಗಂಟೆಯವರೆಗೂ ಜನ ಕುತೂಹಲದಿಂದ ಬೀಚ್‌ಗೆ ಬರುತ್ತಿದ್ದಾರೆ. ಕೆಲವರು ರಿಕ್ಷಾ, ಕಾರುಗಳಲ್ಲಿ ಬಂದರೆ, ದೂರದ ಹಳ್ಳಿಯ ಜನ ಬಸ್ ಮಾಡಿಕೊಂಡು ಕೂಡ ಬರುತ್ತಿದ್ದಾರೆ. ನಮ್ಮ ಜಿಲ್ಲೆಯವರು ಮಾತ್ರವಲ್ಲದೆ ಮಂಗಳೂರು, ಬೆಂಗಳೂರು ಚಿಕ್ಕಮಗಳೂರು ಜಿಲ್ಲೆಯವರು ಕೂಡ ಈ ವಿಸ್ಮಯವನ್ನು ಕಾಣಲು ಉಡುಪಿಗೆ ಬರುತ್ತಿದ್ದಾರೆ. ಕೆಲವು ಕಡೆ ಈ ನೀಲಿ ಬೆಳಕಿನ ದೃಶ್ಯ ಕಡಿಮೆ ಆಗುತ್ತಿದ್ದು, ನ.25ರಂದು ಮಧ್ಯರಾತ್ರಿ ಬಳಿಕ ಪಡುಕೆರೆ ಕೆಲವು ಭಾಗಗಳಲ್ಲಿ ತುಂಬಾ ಹೆಚ್ಚಿನ ಬೆಳಕು ಕಂಡುಬಂದಿದೆ''.

-ಮಂಜುನಾಥ್ ಕಾಮತ್, ಉಪನ್ಯಾಸಕರು, ಉಡುಪಿ

‘ನಾಕ್ಟಿಲುಕ ಸಿಂಟಿಲನ್ಸ್’ ಎಂಬ ಸೂಕ್ಷ್ಮ ಏಕಕೋಶ ಜೀವಿ ವ್ಯಾಪಕ ಪ್ರಮಾಣ ದಲ್ಲಿ ಬೆಳೆದಿರುವ ಕಾರಣ ಸಮುದ್ರ ಹಗಲಿನಲ್ಲಿ ಹಸಿರು ಮತ್ತು ರಾತ್ರಿ ವೇಳೆ ನೀಲಿಬಣ್ಣದಿಂದ ಹೊಳೆಯುತ್ತಿದೆ. ಇದು ಹೆಚ್ಚೆಂದರೆ ಒಂದು ಕಡೆ ಮೂರು ದಿನಗಳ ಕಾಲ ಮಾತ್ರ ಉಳಿಯುತ್ತದೆ. ಮತ್ತೆ ಅದಕ್ಕೆ ಅಲ್ಲಿ ಬೇಕಾದ ಪೋಷಕಾಂಶ ಸಿಗದಿದ್ದಾಗ ಬೆಳೆವಣಿಗೆ ಇಲ್ಲದೆ ಅದರ ಪ್ರಮಾಣ ಕಡಿಮೆ ಆಗುತ್ತದೆ. ಮತ್ತೆ ಬೇರೆ ಕಡೆ ಪೋಷಕಾಂಶ ಇರುವಲ್ಲಿ ಹೆಚ್ಚು ಕಂಡುಬರುತ್ತದೆ. ಒಂದು ಲೀಟರ್ ನೀರಿನಲ್ಲಿ 10ಲಕ್ಷಕ್ಕಿಂತ ಹೆಚ್ಚು ಜೀವಕೋಶಗಳು ಇದ್ದಾಗ ಮಾತ್ರ ಬೆಳಕು ಕಂಡು ಬರುತ್ತದೆ. ಇದು ಎಲ್ಲ ಅಲೆಗಳಲ್ಲಿಯೂ ಕಾಣಸಿಗುವುದಿಲ್ಲ’

-ಡಾ.ಶಿವಕುಮಾರ್ ಹರಗಿ, ಸಹಾಯಕ ಪ್ರಾಧ್ಯಾಪಕರು, ಕಡಲ ಜೀವಶಾಸ್ತ್ರ ವಿಭಾಗ, ಕರ್ನಾಟಕ ವಿವಿ, ಕಾರವಾರ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News