ಚುನಾವಣೆಯ ಪ್ರಚಾರದಲ್ಲಿ ಪ್ರಚೋದನಕಾರಿ ಭಾಷಣದ ವಿರುದ್ಧ ಕಠಿಣ ಕ್ರಮ: ಹೈದರಾಬಾದ್ ಪೊಲೀಸರ ಎಚ್ಚರಿಕೆ

Update: 2020-11-26 14:53 GMT

ಹೈದರಾಬಾದ್, ನ.26: ಹೈದರಾಬಾದ್ ಪೌರಾಡಳಿತ ಸಂಸ್ಥೆಗಳಿಗೆ ಡಿಸೆಂಬರ್ 1ರಂದು ನಡೆಯಲಿರುವ ಚುನಾವಣೆಯ ಪ್ರಚಾರ ತೀವ್ರಗೊಳ್ಳುತ್ತಿರುವಂತೆಯೇ, ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.

ಕೋಮುಶಕ್ತಿಗಳು ಶಾಂತಿ ಕೆಡಿಸಲು ಪ್ರಯತ್ನಿಸಲಿವೆ ಎಂಬ ಮಾಹಿತಿ ದೊರಕಿದೆ. ಚುನಾವಣಾ ಭಾಷಣಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತಿದ್ದೇವೆ. ಗಲಭೆಗೆ ಪ್ರಚೋದನೆ ನೀಡುವ ರೀತಿಯ ಭಾಷಣ ಮಾಡುವವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ಗಲಭೆ ಸೃಷ್ಟಿಸಲು ಪ್ರಯತ್ನಿಸುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಚುನಾವಣೆ ಸುಸೂತ್ರವಾಗಿ ನಡೆಯಲು 51,500 ಪೊಲೀಸರನ್ನು ನಿಯೋಜಿಸಲಾಗುವುದು ಎಂದು ಪೊಲೀಸ್ ಮಹಾನಿರ್ದೇಶಕ ಮಹೇಂದರ್ ರೆಡ್ಡಿ ಹೇಳಿದ್ದಾರೆ.

ಆನ್‌ಲೈನ್ ಮೂಲಕ ಪ್ರಚೋದನಕಾರಿ ಸಂದೇಶ ರವಾನಿಸದಂತೆ ಎಚ್ಚರ ನೀಡಿದ ಅವರು, ಇಂತಹ ಸಂದೇಶದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ಜನರನ್ನು ವಿನಂತಿಸಿದರು.

ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಶನ್(ಜಿಎಚ್‌ಎಂಸಿ) ಚುನಾವಣಾ ಪ್ರಚಾರದ ಸಂದರ್ಭ ಬಿಜೆಪಿ ಮುಖಂಡರು, ಪ್ರಮುಖವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಲವು ವಿವಾದಾತ್ಮಕ ಹೇಳಿಕೆ ನೀಡಿರುವ ಬೆನ್ನಿಗೇ ಪೊಲೀಸರು ಈ ಎಚ್ಚರಿಕೆ ನೀಡಿದ್ದಾರೆ. ತೆಲಂಗಾಣ ರಾಷ್ಟ್ರಸಮಿತಿ(ಟಿಆರ್‌ಎಸ್) ಪಕ್ಷ ಮತ್ತು ಅಸದುದ್ದೀನ್ ಉವೈಸಿಯವರ ಎಐಎಂಐಎಂ ಪಕ್ಷದ ಬಗ್ಗೆ ತೇಜಸ್ವಿ ಸೂರ್ಯ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಜೊತೆಗೆ, ತೇಜಸ್ವಿಸೂರ್ಯ ಅನುಮತಿ ಪಡೆಯದೆ ಉಸ್ಮಾನಿಯಾ ವಿವಿಯ ಕ್ಯಾಂಪಸ್ ಪ್ರವೇಶಿಸಿದ್ದಾರೆ ಎಂದು ವಿವಿಯ ರಿಜಿಸ್ಟ್ರಾರ್ ದೂರು ನೀಡಿದ್ದಾರೆ. ತೆಲಂಗಾಣ ಬಿಜೆಪಿ ಅಧ್ಯಕ್ಷ , ಸಂಸದ ಬಂಡಿ ಸೂರ್ಯಕುಮಾರ್ ‘ರೊಹಿಂಗ್ಯಾಗಳು ಮತ್ತು ಪಾಕಿಸ್ತಾನೀಯರನ್ನು ಹೊರದಬ್ಬಲು ಸರ್ಜಿಕಲ್ ದಾಳಿ ನಡೆಸುತ್ತೇವೆ’ ಎಂದು ಹೇಳಿಕೆ ನೀಡಿರುವುದಾಗಿ ಆರೋಪಿಸಲಾಗಿದೆ. ಹೈದರಾಬಾದ್‌ನಲ್ಲಿ ರೊಹಿಂಗ್ಯಾಗಳ ಅಕ್ರಮ ವಾಸಕ್ಕೆ ಅವಕಾಶ ನೀಡಲಾಗಿದೆ ಎಂಬ ಬಿಜೆಪಿ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಡಿಜಿಪಿ ಮಹೇಂದರ್ ರೆಡ್ಡಿ ‘ರೊಹಿಂಗ್ಯಾಗಳ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಅಕ್ರಮ ದಾಖಲೆಪತ್ರ ಹೊಂದಿರುವ 62 ಜನರ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News