ದಿಲ್ಲಿ ಹಿಂಸಾಚಾರ: ತಪ್ಪೊಪ್ಪಿಗೆ ಹೇಳಿಕೆ ಸೋರಿಕೆ ಕುರಿತ ತನಿಖಾ ವರದಿ ಸಲ್ಲಿಸಲು ಪೊಲೀಸರಿಗೆ ಸೂಚನೆ

Update: 2020-11-26 14:55 GMT

ಹೊಸದಿಲ್ಲಿ, ನ.26: ಪೌರತ್ವ ಕಾಯ್ದೆಯನ್ನು ವಿರೋಧಿಸಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಪ್ರತಿಭಟನೆ ಸಂದರ್ಭದ ಕೋಮು ಗಲಭೆಗೆ ಸಂಬಂಧಿಸಿ ಬಂಧಿಸಲ್ಪಟ್ಟಿದ್ದ ಜಾಮಿಯಾ ಮಿಲ್ಲಿಯಾ ವಿವಿ ವಿದ್ಯಾರ್ಥಿ ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆ ಮಾಧ್ಯಮಗಳಿಗೆ ಸೋರಿಕೆಯಾದ ಬಗ್ಗೆ ನಡೆದ ತನಿಖಾ ವರದಿಯನ್ನು ಸಲ್ಲಿಸುವಂತೆ ದಿಲ್ಲಿ ಹೈಕೋರ್ಟ್ ಗುರುವಾರ ಪೊಲೀಸರಿಗೆ ಸೂಚಿಸಿದೆ.

ತಪ್ಪೊಪ್ಪಿಗೆ ಹೇಳಿಕೆ ಸೋರಿಕೆಯಾದ ಕುರಿತ ವಿಜಿಲೆನ್ಸ್ ತನಿಖೆ ಮುಕ್ತಾಯವಾಗಿದೆ ಎಂದು ದಿಲ್ಲಿ ಪೊಲೀಸರ ವಕೀಲರು ಹೈಕೋರ್ಟ್‌ಗೆ ತಿಳಿಸಿದರು. ಈ ತನಿಖೆಯ ಕುರಿತ ಸ್ಥಿತಿಗತಿ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ವಿಭು ಬಖ್ರು ಸೂಚಿಸಿದರು. ವಿಚಾರಣೆಯ ಸಂದರ್ಭ ತಾನು ನೀಡಿದ್ದ ಹೇಳಿಕೆಯನ್ನು ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ಸೋರಿಕೆ ಮಾಡುವ ಮೂಲಕ ದುರ್ನಡತೆ ತೋರಿದ್ದಾರೆ ಎಂದು ಜಾಮಿಯಾ ಮಿಲ್ಲಿಯಾ ವಿವಿ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸೋರಿಕೆಯಾದ ಮಾಹಿತಿಯನ್ನು ಪ್ರಸಾರ ಮಾಡಿದ ಝೀ ನ್ಯೂಸ್ ಮೀಡಿಯಾ ಕಾರ್ಪೊರೇಶನ್ ಮತ್ತು ಒಪಿಇಂಡಿಯಾ ಸಂಸ್ಥೆಗಳು ಪ್ರಸಾರ ಸಂಹಿತೆಯನ್ನು ಉಲ್ಲಂಘಿಸಿವೆ. ಈ ಬಗ್ಗೆ ಲಿಖಿತವಾಗಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಬೇಕೆಂದು ಇಕ್ಬಾಲ್ ಪರ ವಕೀಲರು ಹೈಕೋರ್ಟ್‌ಗೆ ಮನವಿ ಸಲ್ಲಿಸಿದರು.

ದೂರಿನಲ್ಲಿ ತಿಳಿಸಿರುವ ಸುದ್ಧಿಯು ಮಾಧ್ಯಮದಲ್ಲಿ ಪ್ರಸಾರವಾಗಿದ್ದು, ಇದರಲ್ಲಿ ತಮ್ಮದು ಕೇವಲ ಮಧ್ಯವರ್ತಿಗಳ ಪಾತ್ರ ಎಂದು ‘ಫೇಸ್‌ಬುಕ್’ನ ಪ್ರತಿನಿಧಿ, ಹಿರಿಯ ನ್ಯಾಯವಾದಿ ಮುಕುಲ್ ರೋಹಟ್ಗಿ ಹೈಕೋರ್ಟ್‌ಗೆ ಮನವಿ ಮಾಡಿಕೊಂಡರು. ಇದನ್ನು ಪರಿಗಣಿಸಿದ ಹೈಕೋರ್ಟ್, ಪ್ರಕರಣದ ಕಕ್ಷೀದಾರರ ಪಟ್ಟಿಯಿಂದ ಫೇಸ್‌ಬುಕ್ ಮತ್ತು ಯೂಟ್ಯೂಬ್‌ಗಳನ್ನು ಕೈಬಿಟ್ಟಿತು ಮತ್ತು ಮುಂದಿನ ವಿಚಾರಣೆಯನ್ನು ಜನವರಿ 18ಕ್ಕೆ ನಿಗದಿಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News