ಲಾಲು ಅವರದ್ದೆಂದು ಹೇಳಲಾದ ಆಡಿಯೊ ತುಣುಕು ವೈರಲ್: ತನಿಖೆಗೆ ಆದೇಶಿಸಿದ ಜಾರ್ಖಂಡ್ ಸರಕಾರ

Update: 2020-11-26 16:05 GMT

ಪಾಟ್ನಾ/ರಾಂಚಿ, ನ. 26: ಜೈಲಿನಲ್ಲಿರುವ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಬಿಜೆಪಿ ಶಾಸಕನೊಂದಿಗೆ ಶಾಸಕರ ಖರೀದಿ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಲಾದ ವೈರಲ್ ಧ್ವನಿ ಸುರುಳಿ ಬಗ್ಗೆ ಜಾರ್ಖಂಡ್ ಸರಕಾರ ತನಿಖೆಗೆ ಆದೇಶಿಸಿದೆ.

ನಿಯಮಗಳ ಉಲ್ಲಂಘನೆ, ಕಾರಾಗೃಹದಲ್ಲಿ ಮೊಬೈಲ್ ಲಭ್ಯತೆ, ಅನಧಿಕೃತ ವ್ಯಕ್ತಿಗಳ ಉಪಸ್ಥಿತಿ ಹಾಗೂ ಇತರ ವಿಷಯಗಳ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ ಸರಕಾರ ಕಾರಾಗೃಹದ ಉಪ ಅಧಿಕಾರಿಗೆ ನಿರ್ದೇಶಿಸಿದೆ.

ಮೇವು ಹಗರಣದ ಹಲವು ಪ್ರಕರಣಗಳಿಗೆ ಸಂಬಂಧಿಸಿ ಲಾಲು ಪ್ರಸಾದ್ ಅವರು ಪ್ರಸ್ತುತ ಜಾರ್ಖಂಡ್‌ನ ರಾಂಚಿಯಲ್ಲಿರುವ ಕಾರಾಗೃಹದಲ್ಲಿ ಇದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆದ ಅಡಿಯೊ ತುಣುಕಿನಲ್ಲಿ ಪಿರ್‌ಪೈಂತಿ ಶಾಸಕ ಲಾಲನ್ ಪಾಸ್ವಾನ್ ಅವರೊಂದಿಗೆ ಲಾಲು ಪ್ರಸಾದ್ ಯಾದವ್ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಬುಧವಾರ ಬಿಹಾರ ವಿಧಾನ ಸಭೆಯ ಸ್ಪೀಕರ್ ಚುನಾವಣೆ ನಡೆಯುವುದಕ್ಕಿಂತ ಮುನ್ನ ಮಂಗಳವಾರ ಕರೆ ಮಾಡಿದ ಸಂದರ್ಭ ಪಾಸ್ವಾನ್ ಬಿಜೆಪಿಯ ಹಿರಿಯ ನಾಯಕರು ಹಾಗೂ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರನ್ನು ಭೇಟಿಯಾಗುತ್ತಿದ್ದರು. ಮಂಗಳವಾರ ರಾತ್ರಿ ಸುಶೀಲ್ ಮೋದಿ ಟ್ವೀಟ್ ಮಾಡಿ, ಲಾಲು ಪ್ರಸಾದ್ ಯಾದವ್ ಅವರು ಸಚಿವ ಸ್ಥಾನದ ಆಮಿಷ ಒಡ್ಡಿ ಎನ್‌ಡಿಎ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಲಾಲು ಧ್ವನಿಯೆಂದು ಹೇಳಲಾದ ಒಂದೂವರೆ ನಿಮಿಷಗಳ ಈ ವೈರಲ್ ಅಡಿಯೊ ತುಣುಕಿನಲ್ಲಿ ಲಾಲು ಪ್ರಸಾದ್ ಯಾದವ್ ಅವರು ಲಾಲನ್ ಪಾಸ್ವಾನ್ ಅವರಲ್ಲಿ ಬಿಹಾರ ವಿಧಾನ ಸಭೆ ಸ್ಪೀಕರ್ ಚುನಾವಣೆಯ ಮತದಾನದಲ್ಲಿ ಪಾಲ್ಗೊಳ್ಳದಂತೆ ವಿನಂತಿಸುವ ಮುನ್ನ ‘ಖುಷಿ ಆಯಿತೇ’ಎಂದು ಹೇಳುವುದು ಕೇಳಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News