1,200 ಕೋ.ರೂ. ಬ್ಯಾಂಕ್ ವಂಚನೆ ಪ್ರಕರಣ: ಅಕ್ಕಿ ರಫ್ತು ಸಂಸ್ಥೆಯ ವಿರುದ್ಧ ಎಫ್‌ಐಆರ್ ದಾಖಲು

Update: 2020-11-26 17:53 GMT

ಹೊಸದಿಲ್ಲಿ, ನ.26: ಬ್ಯಾಂಕ್‌ಗಳಿಗೆ ಸುಮಾರು 1,200 ಕೋಟಿ ರೂ. ವಂಚಿಸಿದ ಆರೋಪದಲ್ಲಿ ದಿಲ್ಲಿ ಮೂಲದ ಅಕ್ಕಿ ರಫ್ತು ಸಂಸ್ಥೆ ಹಾಗೂ ಅದರ ನಿರ್ದೇಶಕರ ಸಹಿತ ಉನ್ನತ ಅಧಿಕಾರಿಗಳ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.

ಅಮೀರಾ ಪುರೆ ಫುಡ್ಸ್ ಪ್ರೈ.ಲಿ. ಸಂಸ್ಥೆ, ಅದರ ನಿರ್ದೇಶಕ ಕರಣ್ ಚನಾನ, ಆಡಳಿತ ನಿರ್ದೇಶಕ ರಾಜೇಶ್ ಅರೋರ, ಅಧಿಕಾರಿಗಳಾದ ಅಪರ್ಣಾ ಪುರಿ, ಜವಾಹರ್ ಕಪೂರ್, ಮಾಜಿ ನಿರ್ದೇಶಕಿ ಅನಿತಾ ಡಿಯಾಂಗ್ ಮತ್ತು ಸಂಸ್ಥೆಯ ಆರ್ಥಿಕ ವಿಭಾಗದ ಮುಖ್ಯಸ್ಥ ಅಕ್ಷಯ್ ಶ್ರೀವಾಸ್ತವ ಆರೋಪಿಗಳು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಕೆನರಾ ಬ್ಯಾಂಕ್ ನೇತೃತ್ವದ 12 ಬ್ಯಾಂಕ್‌ಗಳ ಒಕ್ಕೂಟ ದೂರು ನೀಡಿತ್ತು. ಬಾಸ್ಮತಿ ಮತ್ತು ಇತರ ಅಕ್ಕಿಯನ್ನು ರಫ್ತು ಮಾಡುವ ಅಮೀರಾ ಪುರೆ ಫುಡ್ಸ್ ಪ್ರೈ.ಲಿ. ಸಂಸ್ಥೆ ತನ್ನ ಲೆಕ್ಕಪತ್ರಗಳಲ್ಲಿ ಬದಲಾವಣೆ ಮಾಡಿ, ಅಧಿಕ ಲಾಭ ಎಂದು ಬಿಂಬಿಸಿ ರಫ್ತು ಉದ್ದೇಶಕ್ಕೆ ಸಾಲ ಪಡೆದಿದೆ. ಹೀಗೆ ಪಡೆದ ಸಾಲವನ್ನು ಇತರ ಉದ್ದೇಶಗಳಿಗೆ ಬಳಸಿದೆ ಮತ್ತು ಇತರ ಖಾತೆಗೆ ಅಕ್ರಮವಾಗಿ ವರ್ಗಾಯಿಸಿ ಅಧಿಕ ಲಾಭ ಗಳಿಸಿದೆ. ಲೆಕ್ಕಪತ್ರ ದಾಖಲೆಯಲ್ಲಿ ಬದಲಾವಣೆ, ವಂಚನೆ, ಹಣದ ದುರುಪಯೋಗವು 2019ರ ಮೇ 22ರಂದು ನಡೆದ ಲೆಕ್ಕಪತ್ರ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ. ಇದರಿಂದ ಬ್ಯಾಂಕ್‌ಗೆ 1200 ಕೋಟಿ ರೂ. ವಂಚನೆಯಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News