ಮಂತ್ರಿಮಂಡಲ ವಿಸ್ತರಣೆ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟದ್ದು: ನಳಿನ್‌

Update: 2020-11-27 14:13 GMT

ಉಡುಪಿ, ನ. 27: ರಾಜ್ಯ ಸಚಿವ ಸಂಪುಟ ವಿಸ್ತರಣೆಯು ಮುಖ್ಯಮಂತ್ರಿ ಯಡಿಯೂರಪ್ಪಅವರ ವಿವೇಚನೆ ಬಿಟ್ಟ ವಿಚಾರ ಆಗಿದೆ. ಅವರು ರಾಷ್ಟ್ರೀಯ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ. ಸಮಯ ಬಂದಾಗ ಸಂಪುಟ ವಿಸ್ತರಣೆ ಆಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಮಣಿಪಾಲ ಹೊಟೇಲೊಂದರಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರು ದೆಹಲಿಗೆ ಓಡಾಟ ಮಾಡುವುದು ಸಹಜ. ರಾಷ್ಟ್ರೀಯ ನಾಯಕರ ಭೇಟಿಗೆ ಹಾಗೂ ಕೇಂದ್ರ ಸರಕಾರದಿಂದ ಅನುದಾನ ತರಲು ದೆಹಲಿಗೆ ಹೋಗಿರಬಹುದು ಎಂದರು.

ಲಿಂಗಾಯುತ ಸಮುದಾಯವನ್ನು ಹಿಂದುಳಿದವರ್ಗಗಳ ಪಟ್ಟಿಗೆ ಸೇರಿಸುವ ವಿಚಾರ ನನ್ನ ಗಮನಕ್ಕೆ ಈವರೆಗೆ ಬಂದಿಲ್ಲ. ಮಾಧ್ಯಮಗಳಲ್ಲಿ ನೋಡಿ ತಿಳಿದು ಕೊಂಡಿದ್ದೇನೆ ಎಂದರು. ಮಸ್ಕಿ ಹಾಗೂ ಬಸವಕಲ್ಯಾಣ ಎರಡೂ ಕ್ಷೇತ್ರಗಳಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸಲಿದೆ. ಎರಡೂ ಕ್ಷೇತ್ರಗಳಲ್ಲಿಯೂ ಪ್ರಮುಖರ ನಿಯೋಜನೆಯಾಗಿದ್ದು, ಅವರೆಲ್ಲ ಕೆಲಸ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ಮಂಗಳೂರಿನಲ್ಲಿ ಲಷ್ಕರೆ ತೊಯಿಬಾ ಬೆಂಬಲ ಬರಹದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇದು ದೇಶ ವಿರೋಧಿ ಚಟುವಟಿಕೆಯಾಗಿದೆ. ರಾಷ್ಟ್ರ ವಿರೋಧಿ ಬರಹ ಬರೆದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ದೇಶದ ಬೇರೆ ಬೇರೆ ಕಡೆಗಳಲ್ಲಿ ಲವ್ ಜಿಹಾದ್ ಪ್ರಕರಣ ಗಳು ನಡೆಯುತ್ತಿವೆ. ಈ ಕುರಿತು ಪಕ್ಷ, ಕೋರ್ ಕಮಿಟಿಯಲ್ಲಿ ತೀರ್ಮಾನ ತೆಗೆದುಕೊಂಡಿದ್ದೇವೆ. ಇದಕ್ಕೆ ಮುಖ್ಯಮಂತ್ರಿ ಕೂಡ ಒಪ್ಪಿಗೆ ಕೊಟ್ಟಿದ್ದಾರೆ. ರಾಜ್ಯದಲ್ಲೂ ಲವ್ ಜಿಹಾದ್ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು.

ಮಂಗಳೂರು ವಿಮಾನ ನಿಲ್ದಾಣಕ್ಕೆ ಹೆಸರು ವಿಚಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ವಿಮಾನ ನಿಲ್ದಾಣಕ್ಕೆ ಹೆಸರಿಡಲು ಹಲವು ನಿಯಮ ಗಳು ಇವೆ. ಎಲ್ಲರ ಅಭಿಪ್ರಾಯ ತೆಗೆದುಕೊಂಡು ತೀರ್ಮಾನ ಮಾಡಲಾಗುವುದು ಎಂದರು. ಡಿಕೆಶಿ ಸಿಬಿಐ ತನಿಖೆ ವಿಚಾರದಲ್ಲಿ ಡಿಕೆಶಿಯನ್ನು ಟಾರ್ಗೆಟ್ ಮಾಡುತ್ತಿಲ್ಲ. ಸಿಬಿಐ ಎಲ್ಲರಿಗೂ ಸಮಾನವಾಗಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಸರಕಾರ ಕೂಡಾ ಹಲವಾರು ಜನರ ತನಿಖೆ ಮಾಡಿದೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ, ಸಂಸದ ರಾದ ಮುನಿಸ್ವಾಮಿ, ಶೋಭಾ ಕರಂದ್ಲಾಜೆ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಉಮನಾಥ್ ಕೋಟ್ಯಾನ್, ಮುಖಂಡರಾದ ಮಹೇಶ್ ತೆಂಗಿನ ಕಾಯಿ, ಮಟ್ಟಾರು ರತ್ನಾಕರ ಹೆಗ್ಡೆ, ಉದಯ ಕುಮಾರ್ ಶೆಟ್ಟಿ, ದಿನಕರ ಬಾಬು ಉಪಸ್ಥಿತರಿದ್ದರು.

ಗ್ರಾಪಂ ಚುನಾವಣೆಯಲ್ಲಿ ಶೇ.80 ಗೆಲ್ಲುವ ಗುರಿ

ಗ್ರಾಮ ಪಂಚಾಯತ್ ಚುನಾವಣೆಗೆ ಪೂರ್ವ ತಯಾರಿ ಹಿನ್ನೆಲೆಯಲ್ಲಿ ಇಡೀ ರಾಜ್ಯದಲ್ಲಿ ಆರು ತಂಡವನ್ನು ರಚನೆ ಮಾಡಿಕೊಂಡು ಗ್ರಾಮ ಸ್ವರಾಜ್ಯ ಸಮಾವೇಶ ಮಾಡಲಾಗುತ್ತಿದೆ. ನಗರ ಕೇಂದ್ರೀಕೃತ ಜಿಲ್ಲೆಗಳನ್ನು ಹೊರತುಪಡಿಸಿ 31 ಜಿಲ್ಲೆಗಳಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಈ ಬಾರಿಯ ಪಂಚಾಯತ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಶೇ.80ರಷ್ಟು ಪಕ್ಷದ ಅಭ್ಯರ್ಥಿಗಳು ಗೆಲ್ಲುವ ಗುರಿ ಹೊಂದ ಲಾಗಿದೆ. ರಾಜ್ಯದಲ್ಲಿ 5808 ಗ್ರಾಪಂಗಳಿದ್ದು, ಎಲ್ಲ ಕಡೆಗಳಲ್ಲಿ ಗೆಲುವು ದಾಖಲಿಸಬೇಕೆಂಬ ಗುರಿಯನ್ನು ಹೊಂದಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News