ಉಗ್ರಗಾಮಿ ಸಂಘಟನೆ ಬೆಂಬಲಿಸಿ ಗೋಡೆ ಬರಹ : ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿ ವಿಹಿಂಪ, ಬಜರಂಗದಳ ಪ್ರತಿಭಟನೆ

Update: 2020-11-27 08:56 GMT

ಮಂಗಳೂರು, ನ. 27: ಭಯೋತ್ಪಾದಕ ಸಂಘಟನೆ ಲಷ್ಕರ್ ಎ ತೊಯಿಬಾ ಬೆಂಬಲಿಸಿ ಕದ್ರಿಯಲ್ಲಿ ಗೋಡೆಬರಹ ಬರೆಯಲಾಗಿದ್ದು, ತಕ್ಷಣ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಒತ್ತಾಯಿಸಿದೆ.

ಶುಕ್ರವಾರ ಮಂಗಳೂರಿನ ಕದ್ರಿಯಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು, ಉಗ್ರಗಾಮಿ ಮನಸ್ಥಿತಿಯವರು ಮಂಗಳೂರಿನಲ್ಲೂ ಇದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಹಿರಂಗವಾಗಿಯೇ ಗೋಡೆ ಬರಹ ಬರೆದ ದೇಶವಿರೋಧಿಗಳನ್ನು ತಕ್ಷಣ ಬಂಧಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ನ ಗೋಪಾಲ ಕುತ್ತಾರ್ ಆಗ್ರಹಿಸಿರು.

ಸಂಘಟನೆಯ ಪ್ರಮುಖರಾದ ಶಿವಾನಂದ ಮೆಂಡನ್ ಮಾತನಾಡಿ, ಮಾಧ್ಯಮಗಳ ಮೂಲಕ ಕಾಶ್ಮೀರ, ಕೇರಳದಲ್ಲಿ, ಪಶ್ಚಿಮ ಬಂಗಾಳದಲ್ಲಿ ನಾವು ಕೇಳುತ್ತಿದ್ದೇವು. ಇದೀಗ ನಮ್ಮ ಮನೆಯಂಗಳದಲ್ಲಿ, ಹೃದಯ ಭಾಗದಲ್ಲಿ ಉಗ್ರಗಾಮಿಗಳು ಇದ್ದಾರೆ ಎಂದು ಹೇಳುವಾಗ ಅಚ್ಚರಿಯಾಗುತ್ತಿದೆ. ಗೋಡೆ ಬರಹವನ್ನು ಬರೆದಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವ ಜತೆಗೆ, ಇದರ ಹಿಂದಿನ ಮಾನಸಿಕತೆಯವರು ಯಾರು ಹಾಗೂ ಇದರ ಪರವಾಗಿ ಯಾವ ಸಂಘಟನೆ ಇದೆ ಎಂಬುದನ್ನು ಪತ್ತೆ ಹಚ್ಚಬೇಕು. ಇಲ್ಲವಾದಲ್ಲಿ ವಿಎಚ್‌ಪಿ ಹಾಗೂ ಬಜರಂಗದಳದ ನೇತೃತ್ವದಲ್ಲಿ ಎಲ್ಲಾ ತಾಲೂಕುಗಳಲ್ಲಿಯೂ ಪ್ರತಿಟನೆ ನಡೆಸಲಾಗುವುದು ಎಂದರು.

ದ.ಕ. ಜಿಲ್ಲೆಯಲ್ಲಿ ವಿಧ್ವಂಸಕ ಕೃತ್ಯ ಮಾಡಬಹುದೆಂಬ ಕನಸೂ ಉಗ್ರ ಸಂಘಟನೆಗಳಿಗೆ ಬೇಡ. ನಿಮ್ಮ ಆಟ ಸಾಕು. ಅಂತಹ ಪ್ರಯತ್ನ ಮಾಡಿದರೆ ತಕ್ಕ ಉತ್ತರ ನೀಡಲಿದ್ದೇವೆ. ಉಗ್ರಗಾಮಿಗಳು, ಉಗ್ರಗಾಮಿಗಳ ಪರವಾಗಿರುವವರು, ಉಗ್ರಗಾಮಿಗಳ ಮಾನಸಿಕ ಸ್ಥಿತಿಯವರಿಗೆ ಉತ್ತರ ನೀಡಲು ಸಂಘ ಪರಿವಾರ, ಬಜರಂಗದಳ ಜಿಲ್ಲೆಯಲ್ಲಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಬಜರಂಗದಳದ ಕಾರ್ಯಕರ್ತರಿದ್ದಾರೆ, ಎಚ್ಚರಿಕೆ ಇರಲಿ ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ಪುನೀತ್ ಅತ್ತಾವರ, ಪ್ರದೀಪ್ ಪಂಪ್‌ವೆಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News