ಕೋವಿಡ್ ಲಸಿಕೆ ಕರ್ನಾಟಕದ ಜನರಿಗೂ ಉಚಿತವಾಗಿ ಸಿಗಲಿ: ಐವನ್ ಡಿಸೋಜಾ

Update: 2020-11-27 09:10 GMT

ಮಂಗಳೂರು, ನ. 27: ಕೋವಿಡ್ ಲಸಿಕೆ ಬಂದ ಬಳಿಕ ಬಿಹಾರ ರಾಜ್ಯಕ್ಕೆ ಉಚಿತವಾಗಿ ಲಸಿಕೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದು, ಕರ್ನಾಟಕದಲ್ಲೂ ಎಲ್ಲರಿಗೂ ಉಚಿತವಾಗಿ ಲಸಿಕೆ ಸಿಗುವಂತಾಗಬೇಕು ಎಂದು ಕೋವಿಡ್ ಹೆಲ್ಪ್‌ಲೈನ್ ಘಟಕ ಸಂಚಾಲಕ ಐವನ್ ಡಿಸೋಜ ಆಗ್ರಹಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಹಾರಕ್ಕೆ ಉಚಿತವಾಗಿ ನೀಡುವುದು ಸ್ವಾಗತಾರ್ಹ. ಆದರೆ ಕರ್ನಾಟಕದಲ್ಲೂ ವ್ಯಾಕ್ಸಿನ್ ಬಂದ ದಿನದಿಂದ ಮೊದಲ ಹಂತದಲ್ಲಿ ಆರೋಗ್ಯ ಸೇವೆ ಮಾಡುವವರಿಗೆ ಲಸಿಕೆ ಒದಗಿಸಿ ಬಳಿಕ ಯಾವುದೇ ತಾರತಮ್ಯವಿಲ್ಲದೆ ಎಲ್ಲ ವರ್ಗದವರಿಗೂ ಉಸಿತವಾಗಿ ಲಸಿಕೆ ಸಿಗುವಂತಾಗಬೇಕು. ಈ ಬಗ್ಗೆ ಕಾಂಗ್ರೆಸ್ ಹೋರಾಟ ನಡೆಸಲು ಸಿದ್ಧವಾಗಿದೆ ಎಂದರು.

ರಾಜ್ಯದಲ್ಲಿ ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್ ಪಡಿತರ ಹೊಂದಿರುವ ಬಡವರ ಕುಟುಂಬದವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಕನಿಷ್ಠ 5ಲಕ್ಷ ರೂ. ಪರಿಹಾರ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಆಗ್ರಹ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 35ಸಾವಿರ ಜನ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 705ಮಂದಿ ಸತ್ತಿದ್ದು, ಅದರಲ್ಲಿ ಶೇ.60ರಷ್ಟು ಮಂದಿ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಅವರಿಗೆ ಕೂಡಲೇ ಪರಿಹಾರ ನಿಧಿ ಘೋಷಿಸಬೇಕು. ಸರಕಾರ ಈಗಾಗಲೇ ಕಾರ್ಪೊರೇಟ್ ಕಂಪನಿ, ಖಾಸಗಿ ಸಂಸ್ಥೆಗಳಿಂದ ಕೋವಿಡ್ ನಿಧಿ ಸಂಗ್ರಹ ಮಾಡಿದೆ. ಹೀಗಿರುವಾಗ ಮೃತಪಟ್ಟ ಬಡವರ ಕುಟುಂಬಕ್ಕೆ ಅನುದಾನ ನೀಡುವುದು ಕಷ್ಟವೇ ಅಲ್ಲ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ 9 ತಪಾಸಣಾ ಲ್ಯಾಬ್‌ಗಳಲ್ಲೂ ಉಚಿತ ಕೋವಿಡ್ ತಪಾಸಣೆಗೆ ವ್ಯವಸ್ಥೆ ಮಾಡಬೆೀಕು ಎಂದು ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮನಪಾ ಮಾಜಿ ಉಪಮೇಯರ್ ಮಹಮ್ಮದ್ ಕುಂಜತ್ ಬೈಲ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್‌ದಾಸ್, ಶುಭೋದಯ ಆಳ್ವ, ವಿವೇಕ್ ರಾಜ್ ಪೂಜಾರಿ, ಸಾಹುಲ್ ಹಮೀದ್, ಅಪ್ಪಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News