ದ.ಕ. ಜಿಲ್ಲೆಯಲ್ಲಿ ಎಚ್‌ಐವಿ ಪಾಸಿಟಿವ್ ಪ್ರಮಾಣ ಇಳಿಮುಖ : ಡಾ. ರಾಮಚಂದ್ರ ಬಾಯರಿ

Update: 2020-11-27 09:13 GMT

ಮಂಗಳೂರು, ನ.27: ಎಚ್‌ಐವಿ ಸೋಂಕಿತರು ಹಾಗೂ ಬಾಧಿತರಿಗೆ ಸಂಬಂಧಿಸಿ ದ.ಕ. ಜಿಲ್ಲೆಯಲ್ಲಿ ಹಲವಾರು ರೀತಿಯ ತಪಾಸಣೆ, ಚಿಕಿತ್ಸೆ ಹಾಗೂ ಜಾಗೃತಿಯ ಪರಿಣಾಮವಾಗಿ ಎಚ್‌ಐ ಪಾಸಿಟಿವ್ ಪ್ರಮಾಣದಲ್ಲಿ ಇಳಿಮುಖವಾಗುತ್ತಿರುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿಂದು ಈ ವಿಷಯತಿಳಿಸಿದ ಅವರು, 90ರ ದಶಕದಲ್ಲಿ ತೀವ್ರ ಆತಂಕ ಹಾಗೂ ಗಂಭೀರತೆಯ ರೂಪ ಪಡೆದಿದ್ದ ಏಡ್ಸ್ ಮಾರಕ ರೋಗ ಪ್ರಸ್ತುತ ದ.ಕ. ಜಿಲ್ಲೆ ಸೇರಿದಂತೆ ಕರ್ನಾಟಕದಲ್ಲಿ ನಿಯಂತ್ರಣದಲ್ಲಿರುವುದು ಅಂಕಿಅಂಶಗಳಿಂದ ವ್ಯಕ್ತವಾಗುತ್ತಿದೆ ಎಂದರು.

ದ.ಕ. ಜಿಲ್ಲೆ ಎಚ್‌ಐವಿ ಪಾಸಿಟಿವ್ ಪ್ರಕರಣಗಳಿಗೆ ಸಂಬಂಧಿಸಿ ಇನ್ನೂ ರೆಡ್ ರೆನ್‌ನಲ್ಲಿ ಇದೆಯಾದರೂ, ವರ್ಷಗಳಿಂದೀಚೆಗೆ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. 2008ರಲ್ಲಿ 1169 ಪಾಸಿಟಿವ್ ಪ್ರಕರಣಗಳಿದ್ದರೆ, 2017ಕ್ಕೆ ಆ ಪ್ರಮಾಣ 595ಕ್ಕೆ, 2018ಕ್ಕೆ 530ಕ್ಕೆ ಹಾಗೂ 2019ಕ್ಕೆ 422 ಪ್ರಕರಣಗಳಿಗೆ ಇಳಿಮುಖವಾಗಿತ್ತು. 2020ರಲ್ಲಿ ಈವರೆಗೆ 103 ಎಚ್‌ಐವಿ ಪಾಸಿಟಿವ್ ಪ್ರಕರಣಗಳು ಪ್ತೆಯಾಗಿವೆ ಎಂದು ಅವರು ಹೇಳಿದರು.

ಗರ್ಭಿಣಿಯರಿಂದ ಮಗುವಿಗೆ ಎಚ್‌ಐವಿ ಸೋಂಕು ತಗಲುವುದನ್ನು ಬಹುತೇಕವಾಗಿ ನಿಯಂತ್ರಿಸಲಾಗಿದೆ. ಪ್ರತಿ ವರ್ಷ ದ.ಕ.ಜಿಲ್ಲೆಯಲ್ಲಿ ಗರ್ಭ ವತಿಯಾಗುವ ಸುಮಾರು 30,000 ಮಂದಿಯನ್ನು ಎಚ್‌ಐವಿ ಪರೀಕ್ಷೆಗೊಳಪಡಿಸಲಾಗುತ್ತಿದೆ. ಮಾತ್ರವಲ್ಲದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಎಚ್‌ಐವಿ ಸೋಂಕಿತ ಹಾಗೂ ಬಾಧಿತ (ಸೋಂಕಿನಿಂದ ಮೃತಪಡುವ ಹೆತ್ತವರ ಮಕ್ಕಳು) ಮಕ್ಕಳಿಗೆ ತಲಾ 1000 ರೂ.ನಂತೆ ಸಹಾಯಧನದ ರೂಪದಲ್ಲಿ ಒದಗಿಸಲಾಗುತ್ತಿದೆ. ಮಕ್ಕಳ ಪ್ರಸ್ತುತ ಸ್ವಯಂ ಪ್ರೇರಿತ ರಕ್ತದಾನ ನಡೆಯುತ್ತಿರುವುದರಿಂದ ರಕ್ತದಾನದ ಮೂಲಕವೂ ಎಚ್‌ಐವಿ ಹರಡುವುದು ನಿಯಂತ್ರಣವಾಗಿದೆ ಎಂದು ಅವರು ಹೇಳಿದರು.

ದ.ಕ. ಜಿಲ್ಲೆಯ ಎಆರ್‌ಟಿ ಕೇಂದ್ರಗಳ ಮಾಹಿತಿಯ ಪ್ರಕಾರ 8432 ಮಂದಿಗೆ ಎಚ್‌ಐವಿ ಸೋಂಕಿತರಾಗಿದ್ದು, ಅವರಲ್ಲಿ 1769 ಮಂದಿ ಮೃತ ರಾಗಿದ್ದಾರೆ. 4080 ಮಂದಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 2022 ಪುರುಷರು, 1729 ಮಹಿಳೆಯರು, 161 ಗಂಡು ಮಕ್ಕಳು ಹಾಗೂ 165 ಹೆಣ್ಣು ಮಕ್ಕಳು ಸೇರಿದ್ದಾರೆ ಎಂದು ಡಾ. ರಾಮಚಂದ್ರ ಬಾಯರಿ ಮಾಹಿತಿ ನೀಡಿದರು.

ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನದ ಅಂಗವಾಗಿ ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸ ಲಾಗಿದೆ. 9 ಗಂಟೆಗೆ ಜಾಥಾ ಹಾಗೂ 10 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಆಯೋಜಿಸಲಾಗಿದೆ ಎಂದು ಎಚ್‌ಐವಿ ಕುರಿತಾದ ಜಿಲ್ಲಾ ನೋಡಲ್ ಅಧಿಕಾರಿ ಡಾ. ಬದ್ರುದ್ದೀನ್ ತಿಳಿಸಿದರು. 

ಗೋಷ್ಠಿಯಲ್ಲಿ ಡಾ. ರತ್, ಮಹೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News