ಸರಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರಿಗೆ ಗೌರವಧನ ನೀಡದೆ ಶೋಷಣೆ : ಆರೋಪ

Update: 2020-11-27 09:17 GMT

ಮಂಗಳೂರು, ನ. 27: ರಾಜ್ಯದ 85 ಸರಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸುಮಾರು 800 ಅರೆಕಾಲಿಕ ಉಪನ್ಯಾಸಕರಿಗೆ ಸರಕಾರವು ಗೌರವಧನ ನೀಡದೆ ನಿರಂತರವಾಗಿ ಶೋಷಣೆ ಮಾಡಲಾಗುತ್ತಿದೆ ಎಂದು ಅಖಿಲ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರ ಸಂಘದ ಅಧ್ಯಕ್ಷ ಎಂ.ಪ್ರಶಾಂತ್ ಅವರು ಆರೋಪಿಸಿದ್ದಾರೆ.

ಶುಕ್ರವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ಉಪನ್ಯಾಸಕರಿಗೆ ಒಂದೂವರೆ ವರ್ಷದವರೆಗಿನ ಗೌರವಧನ ನೀಡಲು ಬಾಕಿಯಿದ್ದು, ಇಷ್ಟಿದ್ದರೂ ಬೋಧನೆಯ ಸೇವೆ ನಾವು ಮಾಡುತ್ತಿದ್ದೇವೆ. ನಮ್ಮ ಸಂಬಳವು ಆಕಾಶದಲ್ಲಿರುವ ಉಲ್ಕೆಯಂತಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸಂಕ್ರಾಂತಿ, ದಸರಾ, ಶಿವರಾತ್ರಿ, ನವರಾತ್ರಿ ಸೇರಿದಂತೆ ಎಲ್ಲಾ ಹಬ್ಬ, ಕುಟುಂಬ ವೆಚ್ಚ, ಸಾಲ ಪಾವತಿ ದಿನಾಂಕ ಎಲ್ಲವೂ ಕಳೆದುಹೋಗಿದ್ದರೂ ನಮಗೆ ಬಾಕಿ ಇರುವ ಗೌರವಧನ ಮಾತ್ರ ಇನ್ನೂ ಬಂದಿಲ್ಲ. ಈ ಬಗ್ಗೆ ಪ್ರಧಾನಿ ಸೇರಿದಂತೆ ದೇಶ/ರಾಜ್ಯದ ಎಲ್ಲಾ ಅಗ್ರಗಣ್ಯ ನಾಯಕರಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಗೌರವಧನ ಇನ್ನೂ ಪಾವತಿಯಾಗಿಲ್ಲ. ಅರೆಕಾಲಿಕ ಉಪನ್ಯಾಸಕರಿಗೆ ಸಹಾಯ ಮಾಡುವ ಸಲುವಾಗಿ ರಾಜ್ಯ ಸರಕಾರವು ಇತ್ತೀಚೆಗೆ ಆ.31ರವರೆಗಿನ ಗೌರವಧನವನ್ನು ಪಾವತಿಸುವ ಬಗ್ಗೆ ಹಲವು ಪ್ರಕಟನೆ ಹೊರಡಿಸಿತಾದರೂ, ಪಾಲಿಟೆಕ್ನಿಕ್ ಕಾಲೇಜುಗಳಿಗೆ ಲಿಖಿತವಾಗಿ ದೊರಕದೆ, ಉಪನ್ಯಾಸಕರಿಗೆ ಗೌರವಧನ ಕೈಗೆ ಬಂದಿಲ್ಲ ಎಂದವರು ಹೇಳಿದರು.

ಅಕ್ಟೋಬರ್ ಮಧ್ಯದಲ್ಲಿ ಹಳೆಯ ಗೌರವಧನದ ಭಾಗಶಃ ಬಿಡುಗಡೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಹಲವು ಸರಕಾರಿ ಪಾಲಿಟೆಕ್ನಿಕ್‌ ಗಳು ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಹೆಚ್ಚಿನ ಅನುಮೋದನೆಗಳು ಬೇಕಾಗಿರುವುದರಿಂದ ಗೌರವಧನ ಮೊತ್ತ ವಿತರಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪನ್ಯಾಸಕರಾದ ರಕ್ಷಣ್, ವಿಶ್ವಾಸ್, ಮಮತಾ, ಉಷಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News