ತುಳು, ಕೊಡವ ಭಾಷಾ ಪ್ರಾಧಿಕಾರ ರಚನೆಗೆ ಬಿ.ಕೆ. ಹರಿಪ್ರಸಾದ್ ಒತ್ತಾಯ

Update: 2020-11-27 09:19 GMT

ಮಂಗಳೂರು, ನ. 27: ರಾಜ್ಯದಲ್ಲಿ ಮರಾಠ ಪ್ರಾಧಿಕಾರ ರಚಿಸಲು ಹೊರಟ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಕನ್ನಡದ ನೆಲ-ಸಂಸ್ಕೃತಿಯ ಭಾಷೆಗಳಾದ ತುಳು ಮತ್ತು ಕೊಡವ ಭಾಷಾ ಪ್ರಾಧಿಕಾರ ರಚನೆ ಮಾಡಲಿ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳು, ಕೊಡವ ನೆಲದ ಭಾಷೆ ಮಾತ್ರವಲ್ಲದೆ ರಾಜ್ಯದ ಅಭಿವೃದ್ಧಿ, ಕೀರ್ತಿಗೋಸ್ಕರ ಅವಿರತವಾಗಿ ದುಡಿದ ಭಾಷೆಗಳನ್ನು ಈ ಭಾಷೆಗಳನ್ನು ರಾಜ್ಯ ಸರಕಾರ ಸಂಪೂರ್ಣ ಕಡೆಗಣಿಸಿದೆ ಎಂದು ಆರೋಪಿಸಿದರು.

ಬಿಜೆಪಿಯ ಹುನ್ನಾರ: ದೇಶದ ಸಂವಿಧಾನ ರಚನೆಯಾಗಿ 73ವರ್ಷವಾದರೂ ಎಸ್ಸಿ-ಎಸ್ಟಿ ಸಮುದಾಯಕ್ಕೆ ಪೂರ್ಣ ಪ್ರಮಾಣದಲ್ಲಿ ಮೀಸಲಾತಿ ಸಿಕ್ಕಿಲ್ಲ. ಸಂವಿಧಾನದಲ್ಲಿ ಸಾಮಾಜಿಕವಾಗಿ ಆ ಸಮುದಾಯವನ್ನು ಮೇಲೆತ್ತುವ ಪ್ರಯತ್ನವಾದರೂ ಪಟ್ಟಭದ್ರ ಹಿತಾಸಕ್ತಿಯಿಂದ ಇದು ಸಾಧ್ಯ ವಾಗಿಲ್ಲ. ಹಾಗೇನಾದರೂ ಮೀಸಲಾತಿ ನೀಡುವುದಿದ್ದರೆ, ಜನಸಂಖ್ಯೆ ಆಧಾರಿತ ಮೀಸಲಾತಿ ನೀಡಲಿ. ಜಾತಿ ಜಾತಿಗೆ ಮೀಸಲಾತಿ ಸಾಧ್ಯವಿಲ್ಲ ಎಂದರು.

ಸಂವಿಧಾನ ರಚನೆ ಮಾಡುವ ಸಂದರ್ಭದಲ್ಲಿ ಮೀಸಲಾತಿಯನ್ನು ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ವರ್ಗದವರ ಅಭಿವೃದ್ಧಿಗಾಗಿ ತೆಗೆದು ಕೊಂಡ ತೀರ್ಮಾನವಾಗಿತ್ತು. ಇದಕ್ಕೆ ಅನುಗುಣವಾಗಿ ಮೀಸಲಾತಿ ಪ್ರಕಟವಾಗಿದೆ. ಆದರೆ ಮೀಸಲಾತಿಗೆ ಈಗಲೂ ಸರಿಯಾದ ನ್ಯಾಯ ಸಿಕ್ಕಿಲ್ಲ. ಒಬಿಸಿಗೆ ಈಗಲೂ ಶೇ.27ರಲ್ಲಿ ಶೇ.19, ದಲಿತರಿಗೆ ಶೇ.16ರಲ್ಲಿ ಶೇ.11 ಮೀಸಲಾತಿ ಸಿಗುತ್ತಿದ್ದು, ಈ ಪರಿಸ್ಥಿತಿಯಲ್ಲಿ ಬಿಜೆಪಿ ಮೀಸಲಾತಿ ನಿರ್ನಾಮ ಮಾಡಲು ಹುನ್ನಾರ ಮಾಡುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಪ್ರತಿಪಕ್ಷ ನಾಯಕ ಅಬ್ದುಲ್ ರವ್ೂ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕಾರ್ಪೊರೇಟರ್ ನವೀನ್ ಡಿಸೋಜ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್‌ದಾಸ್, ಶುಭೋದಯ ಆಳ್ವ, ಸುರೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News