ಅರ್ನಬ್ ವಿರುದ್ಧದ ಪ್ರಕರಣದಲ್ಲಿ ಮೇಲ್ನೋಟಕ್ಕೆ ಹುರುಳಿಲ್ಲ: ಸುಪ್ರೀಂ ಕೋರ್ಟ್

Update: 2020-11-27 14:06 GMT

ಹೊಸದಿಲ್ಲಿ,ನ.27: ಸರಕಾರಗಳು ಪ್ರಜೆಗಳಿಗೆ ಕಿರುಕುಳಗಳನ್ನು ನೀಡಲು ಕ್ರಿಮಿನಲ್ ಕಾನೂನನ್ನು ಅಸ್ತ್ರವನ್ನಾಗಿ ಬಳಸಬಾರದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯವು ಉದ್ಯಮಿಯೋರ್ವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿಯ ಸಂಪಾದಕ ಅರ್ನಾಬ್ ಗೋಸ್ವಾಮಿಯವರಿಗೆ ನೀಡಿರುವ ಮಧ್ಯಂತರ ಜಾಮೀನನ್ನು ಮುಂದುವರಿಸಿದೆ.

ತನ್ನ ವಿರುದ್ಧದ ಎಫ್‌ಐಆರ್‌ನ್ನು ರದ್ದುಗೊಳಿಸುವಂತೆ ಕೋರಿ ಗೋಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ಬಾಂಬೆ ಉಚ್ಚ ನ್ಯಾಯಾಲಯವು ಇತ್ಯರ್ಥಗೊಳಿಸುವವರೆಗೆ ಮತ್ತು ನಂತರವೂ ಅವರು ಈ ನ್ಯಾಯಾಲಯವನ್ನು ಸಂಪರ್ಕಿಸಲು ಅನುಕೂಲವಾಗುವಂತೆ ನಾಲ್ಕು ವಾರಗಳ ಕಾಲ ಮಧ್ಯಂತರ ಜಾಮೀನು ಮುಂದುವರಿಯಲಿದೆ ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಇಂದಿರಾ ಬ್ಯಾನರ್ಜಿ ಅವರ ಪೀಠವು ಶುಕ್ರವಾರ ತನ್ನ ಆದೇಶದಲ್ಲಿ ತಿಳಿಸಿದೆ.

ತನಗೆ ಜಾಮೀನು ಮಂಜೂರು ಮಾಡಲು ಬಾಂಬೆ ಉಚ್ಚ ನ್ಯಾಯಾಲಯವು ನಿರಾಕರಿಸಿದ ಬಳಿಕ ಗೋಸ್ವಾಮಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.

ತಾನು ನ.11ರಂದು ಗೋಸ್ವಾಮಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದಕ್ಕೆ ಕಾರಣಗಳನ್ನು ವಿವರಿಸಿದ ಪೀಠವು ಎಫ್‌ಐಆರ್‌ನ ಪ್ರಾಥಮಿಕ ಪರಿಶೀಲನೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿಲ್ಲ ಎಂದು ತಿಳಿಸಿತು. ಉಚ್ಚ ನ್ಯಾಯಾಲಯವು ಎಫ್‌ಐಆರ್ ಮತ್ತು ಆರೋಪಗಳ ಸ್ವರೂಪದ ಬಗ್ಗೆ ಪ್ರಾಥಮಿಕ ಪರಿಶೀಲನೆಯನ್ನು ನಡೆಸಬೇಕಿತ್ತು ಎಂದು ಹೇಳಿದ ಪೀಠವು,ಅದು ಜಾಮೀನು ನೀಡದೆ ತಪ್ಪೆಸಗಿದೆ ಎಂದು ತಿಳಿಸಿತು.

 ಸರಕಾರಗಳು ಗುರಿಯಾಗಿಸಿಕೊಂಡಿರುವ ಪ್ರಜೆಗಳ ಸ್ವಾತಂತ್ರ್ಯವನ್ನೊಳಗೊಂಡ ಪ್ರಕರಣಗಳಲ್ಲಿ ಆಡಳಿತ ನಡೆಸುವವರು ಅವರಿಗೆ ಕಿರುಕುಳ ನೀಡಲು ಕ್ರಿಮಿನಲ್ ಕಾನೂನನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳದಂತೆ ನ್ಯಾಯಾಲಯಗಳು ಖಚಿತಪಡಿಸಬೇಕು ಎಂದು ಹೇಳಿತು.

ಸರಕಾರಗಳು ವಿಭಿನ್ನ ಸಿದ್ಧಾಂತಗಳು ಅಥವಾ ಅಭಿಪ್ರಾಯಗಳನ್ನು ಹೊಂದಿರುವುದಕ್ಕಾಗಿ ಈ ರೀತಿಯಲ್ಲಿ ಯಾವುದೇ ವ್ಯಕ್ತಿಯನ್ನು ಗುರಿಯಾಗಿಸಿಕೊಳ್ಳುವಂತಿಲ್ಲ ಮತ್ತು ಸಾಂವಿಧಾನಿಕ ನ್ಯಾಯಾಲಯಗಳು ಪ್ರಜೆಗಳ ಸ್ವಾತಂತ್ರ್ಯವನ್ನು ರಕ್ಷಿಸಲು ಬದ್ಧವಾಗಿವೆ ಎಂದು ಸರ್ವೋಚ್ಚ ನ್ಯಾಯಾಲಯವು ನ.11ರಂದು ಹೇಳಿತ್ತು.

ಮುಂಬೈ ಬಳಿಯ ನಿವಾಸಿ,ಒಳಾಂಗಣ ವಿನ್ಯಾಸಕಾರ ಅನ್ವಯ್ ನಾಯ್ಕಾ ಮತ್ತು ಅವರ ತಾಯಿ 2018ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಗೋಸ್ವಾಮಿ ಮತ್ತು ಇತರರು ತನಗೆ ಭಾರೀ ಮೊತ್ತದ ಬಾಕಿಯನ್ನು ಪಾವತಿಸಿಲ್ಲ ಎಂದು ನಾಯ್ಕ್ ತನ್ನ ಆತ್ಮಹತ್ಯಾ ಚೀಟಿಯಲ್ಲಿ ಬರೆದಿದ್ದರು. ಗೋಸ್ವಾಮಿ ಮತ್ತು ಇತರ ಇಬ್ಬರ ವಿರುದ್ಧ ನಾಯ್ಕ್ ಪತ್ನಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. ತನಿಖೆಯನ್ನು ನಡೆಸಿದ್ದ ರಾಜ್ಯ ಪೊಲೀಸರು ನ್ಯಾಯಾಲಯಕ್ಕೆ ಮುಕ್ತಾಯ ವರದಿಯನ್ನು ಸಲ್ಲಿಸಿದ್ದರು,ಆದರೆ ಈ ವರ್ಷದ ಪೂರ್ವಾರ್ಧದಲ್ಲಿ ಪ್ರಕರಣಕ್ಕೆ ಮರುಜೀವ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News