ನಾನು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಡಬೇಡಿ: ಬಿಜೆಪಿಗೆ ಉದ್ಧವ್ ಠಾಕ್ರೆ ಎಚ್ಚರಿಕೆ

Update: 2020-11-27 14:15 GMT

ಮುಂಬೈ,ನ.27: ಬಿಜೆಪಿಯು ತನ್ನ ಸರಕಾರದ ವಿರುದ್ಧ ಪ್ರತೀಕಾರವನ್ನು ಸಾಧಿಸಲು ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಶುಕ್ರವಾರ ಇಲ್ಲಿ ಆರೋಪಿಸಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು,ತಾನು ಅದರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಅನಿವಾರ್ಯವಾಗಿಸಬೇಡಿ ಎಂದು ಆ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಟ್ರದ ಸಮ್ಮಿಶ್ರ ಸರಕಾರವು ಒಂದು ವರ್ಷವನ್ನು ಪೂರೈಸಿದ ಸಂದರ್ಭದಲ್ಲಿ ಶಿವಸೇನೆಯ ಮುಖವಾಣಿ ‘ಸಾಮನಾ ’ಕ್ಕೆ ನೀಡಿದ ಸಂದರ್ಶನದಲ್ಲಿ ಠಾಕ್ರೆ ಈ ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ. ಮೂರು ದಿನಗಳ ಹಿಂದೆ ಜಾರಿ ನಿರ್ದೇಶನಾಲಯ(ಈ.ಡಿ)ವು ಶಿವಸೇನೆ ಶಾಸಕ ಪ್ರತಾಪ ಸರನಾಯಕ್ ಅವರ ನಿವಾಸದ ಮೇಲೆ ದಾಳಿ ನಡೆಸಿ, ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ಅವರ ಪುತ್ರ ವಿಹಾಂಗ್ ಸರನಾಯಕ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದ ಹಿನ್ನೆಲೆಯಲ್ಲಿ ಠಾಕ್ರೆಯವರ ಈ ಎಚ್ಚರಿಕೆ ಹೊರಬಿದ್ದಿದೆ.

ತನ್ನ ರಾಜಕೀಯ ಶತ್ರುಗಳ ಕುಟುಂಬಗಳ ಹಿಂದೆ ಬಿದ್ದಿರುವುದಕ್ಕಾಗಿ ಬಿಜೆಪಿಯನ್ನು ಟೀಕಿಸಿರುವ ಠಾಕ್ರೆ, ‘ತಮಗೂ ಕುಟುಂಬಗಳು ಮತ್ತು ಮಕ್ಕಳಿರುವುದನ್ನು ಅವರು (ಬಿಜೆಪಿ) ನೆನಪಿಟ್ಟುಕೊಳ್ಳಬೇಕು. ಖುದ್ದು ಅವರೇ ಶುದ್ಧರಾಗಿಲ್ಲ. ಅವರನ್ನು ಹೇಗೆ ಎದುರಿಸಬೇಕು ಎನ್ನುವುದು ನಮಗೆ ಗೊತ್ತಿದೆ ’ ಎಂದು ಹೇಳಿದರು.

ತನ್ನ ಸಹನೆಯನ್ನು ತನ್ನ ಅಸಹಾಯಕತೆ ಎಂದು ಭಾವಿಸಬಾರದು ಎಂದಿರುವ ಅವರು,‘ಎಲ್ಲ ಬೆಳವಣಿಗೆಗಳನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ದ್ವೇಷ ಮತ್ತು ಪ್ರತೀಕಾರದ ರಾಜಕೀಯ ಮಹಾರಾಷ್ಟ್ರದ ಸಂಸ್ಕೃತಿಯಲ್ಲ. ಸೇಡಿನ ದಾರಿಯಲ್ಲಿ ನಡೆಯಲು ನಾನು ಬಯಸುವುದಿಲ್ಲ. ಕ್ರಮಗಳನ್ನು ಕೈಗೊಳ್ಳುವುದನ್ನು ನನಗೆ ಅನಿವಾರ್ಯವಾಗಿಸಬೇಡಿ ’ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರನ್ನು ಪರೋಕ್ಷವಾಗಿ ಪ್ರಸ್ತಾಪಿಸಿರುವ ಠಾಕ್ರೆ, ತಮ್ಮ ವಿರುದ್ಧವೂ ಪ್ರಕರಣಗಳಿವೆ ಎನ್ನುವುದನ್ನು ‘ಇತರರು ’ ಮರೆಯಬಾರದು. ರಾಜಕೀಯವನ್ನು ಹೇಗೆ ಮಾಡಬೇಕೋ ಹಾಗೆಯೇ ಮಾಡಿ. ನೀವು ಅಧಿಕಾರವನ್ನು ದುರುಪಯೋಗಪಡಿಸಿಕೊಂಡರೆ ಅಧಿಕಾರವು ಶಾಶ್ವತವಲ್ಲ ಎನ್ನುವುದೂ ನಿಮಗೆ ನೆನಪಿರಲಿ ಎಂದಿದ್ದಾರೆ.

2018ರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ ಮತ್ತು ಅದರ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ಮಹಾರಾಷ್ಟ್ರ ಸರಕಾರವು ಕ್ರಮವನ್ನು ಕೈಗೊಂಡಿದ್ದರಿಂದ ಸರನಾಯಕ್ ಅವರ ಮೇಲಿನ ಈ.ಡಿ.ದಾಳಿಯು ಸರಕಾರದ ವಿರುದ್ಧ ಬಿಜೆಪಿಯ ರಾಜಕೀಯ ಪ್ರತೀಕಾರವಾಗಿದೆ ಎಂದು ಠಾಕ್ರೆಯವರ ಶಿವಸೇನೆಯೂ ಮಂಗಳವಾರ ಆರೋಪಿಸಿತ್ತು.

 ಗೋಸ್ವಾಮಿ ವಿರುದ್ಧ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಗೊತ್ತುವಳಿಯನ್ನು ಮಂಡಿಸಿದ್ದ ಸರನಾಯಕ್,ಅವರ ವಿರುದ್ಧ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದ ಪ್ರಕರಣಕ್ಕೆ ಮರುಜೀವ ನೀಡುವಂತೆಯೂ ಆಗ್ರಹಿಸಿದ್ದರು. 2018ರಲ್ಲಿ ತನ್ನ ತಾಯಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಒಳಾಂಗಣ ವಿನ್ಯಾಸಕಾರ ಅನ್ವಯ ನಾಯ್ಕ್, ಗೋಸ್ವಾಮಿ ಮತ್ತು ಇತರ ಇಬ್ಬರು ತನಗೆ ಭಾರೀ ಮೊತ್ತವನ್ನು ಬಾಕಿಯಿರಿಸಿದ್ದಾರೆ ಎಂದು ಆತ್ಮಹತ್ಯಾ ಚೀಟಿಯಲ್ಲಿ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News