ತೀವ್ರ ಆರ್ಥಿಕ ಸಂಕಷ್ಟ: ಪೌರತ್ವದ ಕನಸು ತ್ಯಜಿಸಿ ಭಾರತದಿಂದ ಹಿಂದಿರುಗಲಿರುವ ಪಾಕ್ ವಲಸಿಗರು

Update: 2020-11-27 16:32 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ನ. 27: ಭಾರತದಲ್ಲಿ ನಿರಂತರ ಆರ್ಥಿಕ ಸಂಕಷ್ಟ ಎದುರಿಸಿದ ಹಿನ್ನೆಲೆಯಲ್ಲಿ ಭಾರತೀಯ ಪೌರತ್ವ ಪಡೆಯುವ ತಮ್ಮ ಕನಸನ್ನು ತ್ಯಜಿಸಿರುವ ಹಿಂದೂ ಹಾಗೂ ಸಿಕ್ಖ್ ನಿರಾಶ್ರಿತರ ತಂಡ ಪಾಕಿಸ್ತಾನಕ್ಕೆ ಹಿಂದಿರುಗಲಿದೆ.

ಕಳೆದ ವರ್ಷ ಮಂಜೂರು ಮಾಡಲಾದ ಪೌರತ್ವ ತಿದ್ದುಪಡಿ ಕಾಯ್ದೆಯ ನಿಯಮಗಳ ಬಗ್ಗೆ ಸರಕಾರ ಇನ್ನು ಕೂಡ ಅಧಿಸೂಚನೆ ಹೊರಡಿಸಿಲ್ಲ. 243 ಪಾಕಿಸ್ತಾನಿ ಪ್ರಜೆಗಳಲ್ಲಿ ನಿರಾಶ್ರಿತರು ಕೂಡ ಇದ್ದಾರೆ. ಇವರಲ್ಲಿ ಹಲವರು ಕೊರೋನ ಸಾಂಕ್ರಾಮಿಕ ರೋಗದಿಂದ ಇಲ್ಲಿ ಸಿಲುಕಿಕೊಂಡವರು. ಈಗ ಇವರಿಗೆ ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ತೆರಳಲು ಗುರುವಾರ ಅನುಮತಿ ನೀಡಲಾಗಿದೆ.

ಪಾಕಿಸ್ತಾನಿ ಪ್ರಜೆಗಳಿಗೆ ‘ನಿರ್ಗಮಿಸಲು’ ‘ಆಕ್ಷೇಪ ಇಲ್ಲ’ ಪತ್ರ ನೀಡಿರುವ ಕೇಂದ್ರ ಗೃಹ ಸಚಿವಾಲಯ, ‘‘ದೀರ್ಘಾವದಿ ವೀಸಾದಲ್ಲಿ ಭಾರತದಲ್ಲಿ ಜೀವಿಸುತ್ತಿರುವ ಪಾಕಿಸ್ತಾನಿ ಪ್ರಜೆಗಳು ಅಥವಾ ಅಧಿಕಾರಿಗಳ ಪರಿಗಣನೆಯಲ್ಲಿರುವ ದೀರ್ಘಾವಧಿ ವೀಸಾಕ್ಕೆ ಅರ್ಜಿ ಸಲ್ಲಿಸಿದವರು ಎಪ್‌ಆರ್‌ಆರ್‌ಒ/ಎಫ್‌ಆರ್‌ಒದಿಂದ ನಿರ್ಗಮನ ಪರವಾನಿಗೆ ಪಡೆಯುವ ಅಗತ್ಯ ಇದೆ’’ ಎಂದಿದೆ.

 ‘‘ಕಳೆದ ನಾಲ್ಕು ವರ್ಷಗಳಿಂದ ನಾನು ಜೋಧಪುರದಲ್ಲಿ ಎಫ್‌ಆರ್‌ಆರ್‌ಒ (ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ) ಭೇಟಿ ನೀಡಿದೆ. ಹೊಸದಿಲ್ಲಿಯಲ್ಲಿರುವ ಸಚಿವಾಲಯದಿಂದ ನನ್ನ ಪತ್ನಿ ಹಾಗೂ ಮಕ್ಕಳಿಗೆ ವೀಸಾಕ್ಕಾಗಿ ಕಾಯುತ್ತಿದ್ದೆ. ನನಗೆ ಈಗ ವೀಸಾ ಸಿಕ್ಕಿತು. ಹಿಂದಿರುಗಲಿದ್ದೇನೆ’’ ಎಂದು 37 ವರ್ಷದ ನಿರಾಶ್ರಿತ ಶ್ರೀಧರ್ ಹೇಳಿದ್ದಾರೆ.

“ಉತ್ತಮ ಜೀವನೋಪಾಯ ಹುಡುಕಿಕೊಂಡು ನಾವು ಇಲ್ಲಿಗೆ ಬಂದೆವು. ಕಳೆದ ಒಂದು ವರ್ಷದಿಂದ ನಾವು ದೀರ್ಘಾವಧಿ ವೀಸಾಕ್ಕಾಗಿ ಪ್ರಯತ್ನಿಸುತ್ತಿದ್ದೇವೆ. ಆದರೆ, ಸಿಗುತ್ತಿಲ್ಲ. ಲಾಕ್‌ಡೌನ್ ಹಾಗೂ ಕೋರೋನದಿಂದಾಗಿ ನಮ್ಮ ಕುಟುಂಬ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ನಾವೀಗ ಹಿಂದಿರುಗಲು ನಿರ್ಧರಿಸಿದ್ದೇವೆ” ಎಂದು ಸಿಂಧ್ ಪ್ರಾಂತ್ಯದ ಹೈದರಾಬಾದ್‌ನ ಇನ್ನೋರ್ವ ನಿರಾಶ್ರಿತ ಮಿಥೂನ್ ಹೇಳಿದ್ದಾರೆ.

ಧಾರ್ಮಿಕ ಕಿರುಕುಳ ಎದುರಿಸಿದ ಹಾಗೂ 2014 ಡಿಸೆಂಬರ್ 31ಕ್ಕಿಂತ ಮುನ್ನ ಭಾರತಕ್ಕೆ ಆಗಮಿಸಿದ ಪಾಕಿಸ್ತಾನ, ಅಫಘಾನಿಸ್ತಾನ ಹಾಗೂ ಬಾಂಗ್ಲಾದೇಶದ ಹಿಂದೂ ಸಿಕ್ಖ್, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರೈಸ್ತ ವಲಸಿಗರಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಪೌರತ್ವ ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News