ನವಜಾತ ಶಿಶುವಿನ ಆರೈಕೆಗೆ ತವರಿಗೆ ತೆರಳಲು ಸಫೂರಾಗೆ ಕೋರ್ಟ್ ಅನುಮತಿ

Update: 2020-11-27 16:36 GMT

ಹೊಸದಿಲ್ಲಿ,ನ.21: ಈಶಾನ್ಯ ದಿಲ್ಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಕಾನೂನು ಬಾಹಿರ ಚಟುವಟಿಕೆಗಳ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲ್ಪಟ್ಟಿರುವ ಸಫೂರಾ ಝರ್ಗಾರ್‌ಗೆ ಅವರ ನವಜಾತ ಶಿಶುವಿನ ಸೂಕ್ತ ಆರೈಕೆಗಾಗಿ ತಾಯಿ ಮನೆಗೆ ಭೇಟಿ ನೀಡುವುದಕ್ಕೆ ಬುಧವಾರ ದಿಲ್ಲಿ ನ್ಯಾಯಾಲಯ ಅನುಮತಿ ನೀಡಿದೆ.

 ಈಶಾನ್ಯ ದಿಲ್ಲಿ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿರುವ ಝರ್ಗಾರ್ ಜಾಮೀನು ಬಿಡುಗಡೆಯಲ್ಲಿದ್ದು, ಅವರಿಗೆ ಅಕ್ಟೋಬರ್ 12ರಂದು ಹೆರಿಗೆಯಾಗಿತ್ತು. ಝರ್ಗಾರ್ ಅವರು ಹರ್ಯಾಣದಲ್ಲಿರುವ ತನ್ನ ತಾಯಿಮನೆಗೆ ಭೇಟಿ ನೀಡಲು ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಅಮಿತ್ ರಾವತ್ ಅನುಮತಿ ನೀಡಿದರು.

 ಝರ್ಗಾರ್ ತನ್ನ ತಾಯಿಮನೆಯನ್ನು ಗೂಗಲ್ ಮ್ಯಾಪ್‌ನಲ್ಲಿ ಗುರುತಿಸುವಂತೆಯೂ, ಆ ಮೂಲಕ ತನಿಖಾಧಿಕಾರಿಗಳು ಆಕೆಯ ಉಪಸ್ಥಿತಿ ಹಾಗೂ ಸ್ಥಳವನ್ನು ದೃಢಪಡಿಸಿಕೊಳ್ಳಬಹುದಾಗಿದೆ ನ್ಯಾಯಾಲಯ ಸೂಚನೆ ನೀಡಿತು.

  ತವರು ಮನೆಯಲ್ಲಿ ಇರುವ ಅವಧಿಯಲ್ಲಿ ಇತರ ಯಾವುದೇ ಚಟುವಟಿಕೆಯಲ್ಲಿ ತೊಡಗದಂತೆಯೂ ನ್ಯಾಯಾಧೀಶರು ಸೂಚನೆ ನೀಡಿದ್ದು ಮತ್ತು 15 ದಿನಗಳಿಗೊಮ್ಮೆ ತನಿಖಾಧಿಕಾರಿಯೊಂದಿಗೆ ಮೊಬೈಲ್ ಫೋನ್ ಮೂಲಕ ಸಂಪರ್ಕದಲ್ಲಿರುವಂತೆಯೂ ಅವರು ತಿಳಿಸಿದರು.

ಝರ್ಗಾರ್ ಪರವಾಗಿ ವಾದಿಸಿದ ನ್ಯಾಯವಾದಿ ರಿತೇಶ್ ದುಬೆ ಅವರು, ತನ್ನ ಕಕ್ಷಿದಾರಳು ಹೆರಿಗೆಯಿಂದ ಚೇತರಿಸಿಕೊಳ್ಳುತ್ತಿದ್ದು, ಆಕೆ ತನ್ನ ಮಗುವಿನ ಪಾಲನೆ, ಪೋಷಣೆ ಮಾಡುವ ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಪೊಲೀಸರ ಪರವಾಗಿ ಹಾಜರಾದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪ್ರಸಾದ್ ಅವರು ಕೂಡಾ ಝರ್ಗಾರ್ ಅವರು ಶರತ್ತುಗಳೊಂದಿಗೆ ತನ್ನ ತವರು ಮನೆಗೆ ತೆರಳುವುದಕ್ಕೆ ತನ್ನ ಯಾವುದೇ ಆಕ್ಷೇಪ ಇಲ್ಲವೆಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News