ಜೆಎನ್‌ಯು ನೇಮಕಾತಿಗಳಲ್ಲಿ ವ್ಯಾಪಕ ಅಕ್ರಮಗಳು: ಬೋಧಕರ ಆರೋಪ

Update: 2020-11-27 17:41 GMT

ಹೊಸದಿಲ್ಲಿ,ನ,27: ಭೌತಿಕ ವಿಜ್ಞಾನ ವಿಭಾಗದಲ್ಲಿ ಇತ್ತೀಚಿಗೆ ಬೋಧಕರ ನೇಮಕಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಮತ್ತು ವಿಶೇಷವಾಗಿ ಕುಲಪತಿಗಳು ಪ್ರಶ್ನಾರ್ಹ ಪೂರ್ವಾಪರ ಹೊಂದಿರುವವರಿಗೆ ಅವಕಾಶ ನೀಡುತ್ತಿದ್ದಾರೆ ಎಂದು ಆರೋಪಿಸಿ ಜವಾಹರಲಾಲ್ ನೆಹರು ವಿವಿ(ಜೆನ್‌ಯು)ಯ ಸ್ಕೂಲ್ ಆಫ್ ಫಿಸಿಕಲ್ ಸೈನ್ಸಸ್ನ ಎಂಟು ಪ್ರೊಫೆಸರ್‌ ಗಳು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ವಿವಿಯ ವಿಸಿಟರ್ ಕೂಡ ಆಗಿರುವ ನೆಲೆಯಲ್ಲಿ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವಂತೆ ಅವರು ರಾಷ್ಟ್ರಪತಿಗಳನ್ನು ಕೋರಿದ್ದಾರೆ.

ನ.23ರಂದು ಈ ಪತ್ರವನ್ನು ಬರೆಯಲಾಗಿದ್ದು, ಪ್ರತಿಗಳನ್ನು ಜೆಎನ್‌ಯು ಕುಲಪತಿ ಎಂ.ಜಗದೀಶ್ ಕುಮಾರ್ ಮತ್ತು ಕುಲಾಧಿಪತಿ ವಿ.ಕೆ.ಸಾರಸ್ವತ್ ಅವರಿಗೆ ರವಾನಿಸಲಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಹಲವಾರು ಉಲ್ಲಂಘನೆಗಳು ನಡೆದಿವೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಅಕ್ಟೋಬರ್‌ ನಲ್ಲಿ ಏಳು ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡಿದ್ದು, ಈ ಪೈಕಿ ಒಬ್ಬರೂ ತಮ್ಮ ಹುದ್ದೆಗೆ ಅಗತ್ಯ ಅನುಭವ ಮತ್ತು ವಿದ್ಯಾರ್ಹತೆಯನ್ನು ಹೊಂದಿಲ್ಲ. ಒಂದು ಪ್ರಕರಣದಲ್ಲಿ ಸಹಾಯಕ ಪ್ರೊಫೆಸರ್ ಆಗಿ ಆಯ್ಕೆಯಾಗಿರುವ ಅಭ್ಯರ್ಥಿಯ ಹೆಸರನ್ನು ಆಯ್ಕೆ ಸಮಿತಿಯು ವಾಡಿಕೆಯಂತೆ ಶಾರ್ಟ್‌ ಲಿಸ್ಟ್ ಕೂಡ ಮಾಡಿರಲಿಲ್ಲ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಪ್ರಮುಖ ಭೌತಶಾಸ್ತ್ರಜ್ಞರು ಮತ್ತು ಖಗೋಳ ಶಾಸ್ತ್ರಜ್ಞರ ಸಮಿತಿಯೊಂದು ಆಯ್ಕೆಯ ರೀತಿ ಮತ್ತು ಆಯ್ಕೆ ಪ್ರಕ್ರಿಯೆಯ ಫಲಿತಾಂಶಗಳನ್ನು ಕೂಲಂಕಶವಾಗಿ ಪರಿಶೀಲಿಸುವವರೆಗೆ ಎಲ್ಲ ನೇಮಕಾತಿಗಳನ್ನು ಅಮಾನತಿನಲ್ಲಿಡಬೇಕು ಎಂದೂ ಈ ಪ್ರೊಫೆಸರ್‌ಗಳು ರಾಷ್ಟ್ರಪತಿಗಳನ್ನು ಕೋರಿದ್ದಾರೆ.

ರಾಷ್ಟ್ರಪತಿಗಳ ಕಚೇರಿಯು ಈ ಪತ್ರವನ್ನು ನ.25ರಂದು ವಿವಿಯ 290ನೇ ಕಾರ್ಯಕಾರಿ ಮಂಡಳಿ ಸಭೆಯ ಪರಿಶೀಲನೆಗೆ ಕಳುಹಿಸಿತ್ತು. ಜಗದೀಶ್ ಕುಮಾರ್ 2016ರಲ್ಲಿ ವಿವಿಯ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ನೇಮಕಾತಿ ಪ್ರಕ್ರಿಯೆಯನ್ನು ಪಾಲಿಸುವುಲ್ಲಿ ಎಡವುತ್ತಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.

 ಕುಲಪತಿಗಳು ವಿಜ್ಞಾನದ ಹಿನ್ನೆಲೆಯವರಾಗಿರುವುದರಿಂದ ವಿಜ್ಞಾನ ವಿಭಾಗವು ಶೈಕ್ಷಣಿಕವಾಗಿ ಬಳಲದಿರುವಂತೆ ಅವರು ಕಾಳಜಿ ವಹಿಸುತ್ತಾರೆ ಎಂದು ತಾವೆಲ್ಲ ಮೊದಲು ಭಾವಿಸಿದ್ದೆವು. ಆದರೆ ಅದೆಲ್ಲ ಸುಳ್ಳಾಗಿದೆ. ಜೆಎನ್‌ಯು ಅನ್ನು ಇನ್ನಷ್ಟು ಗುರಿಯಾಗಿಸಿಕೊಂಡು ಎಲ್ಲಿಂದಲೋ ನಿಯಂತ್ರಿಸಲ್ಪಡುತ್ತಿರುವ ವ್ಯಾಪಕ ಸಂಚೊಂದು ನಡೆದಿದೆ ಎಂದು ಹೆಸರು ಹೇಳಿಕೊಳ್ಳಲು ಬಯಸದ ಪ್ರೊಫೆಸರ್ ಓರ್ವರು ಹೇಳಿದರು.

ವಿವಿಯಲ್ಲಿ ನೇಮಕಾತಿಗಳು ರಾಜಕೀಯ ಪ್ರೇರಿತವಾಗಿವೆ ಹಾಗೂ ಬಿಜೆಪಿ ಸರಕಾರದ ಮಾರ್ಗದಲ್ಲಿ ನಡೆಯುವ,ಯಾವುದೇ ಪ್ರಶ್ನೆಗಳನ್ನು ಕೇಳದ ಜನರನ್ನು ತುಂಬಲಾಗುತ್ತಿದೆ ಎಂದೂ ಅವರು ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ಜೆಎನ್‌ಯು ಶಿಕ್ಷಕರ ಸಂಘದ ಕಾರ್ಯದರ್ಶಿ ಮೌಸಮಿ ಬಸು ಅವರು, ಇತ್ತೀಚಿನ ಕೆಲವು ವರ್ಷಗಳಲ್ಲಿ ಶಿಕ್ಷಕ ಹುದ್ದೆಗಳಿಗೆ ನೇಮಕಗೊಂಡಿರುವ ಹೆಚ್ಚಿವನವರು ಎಬಿವಿಪಿಯೊಂದಿಗೆ ನಂಟು ಹೊಂದಿದ್ದವರಾಗಿದ್ದಾರೆ ಎಂದರು. ಕುಲಪತಿಗಳ ಕ್ರಮವು ವಿವಿಯ ಮೂಲಸ್ವರೂಪವನ್ನೇ ನಾಶ ಮಾಡುವ ಪ್ರಯತ್ನವಾಗಿದೆ ಎಂದು ಅವರು ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News