​ಗ್ರಾಪಂ ಚುನಾವಣೆಗಾಗಿ ಹಿಂದಿನ ಕಾಂಗ್ರೆಸ್ ಸರಕಾರದ ವಿರುದ್ಧ ಅಪಪ್ರಚಾರ : ಸೊರಕೆ

Update: 2020-11-28 12:07 GMT

ಉಡುಪಿ, ನ. 28: ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ, ಈ ಹಿಂದಿನ ಸಿದ್ದರಾಮಯ್ಯ ಸರಕಾರದ ವಿರುದ್ಧ ಅಪಪ್ರಚಾರ ಮಾಡಿ, ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಟೀಕಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡ್ರಗ್ಸ್ ಮಾಫಿಯಾದಿಂದಲೇ ಸಿದ್ದರಾಮಯ್ಯ ಸರಕಾರ ಉಳಿದದ್ದು ಎಂದು ಆರೋಪ ಮಾಡುವ ಇವರು, ಕಳೆದ ಒಂದೂವರೆ ವರ್ಷಗಳಿಂದ ಡ್ರಗ್ಸ್ ಮಾಫಿಯಾದ ವಿರುದ್ಧ ಯಾಕೆ ಕ್ರಮ ತೆಗೆದುಕೊಂಡಿಲ್ಲ. ಆ ಸಮಯದಲ್ಲಿ ಅಧಿ ವೇಶನದಲ್ಲಿ ಈ ಬಗ್ಗೆ ಒಂದೇ ಒಂದು ಶಬ್ದ ಯಾಕೆ ಮಾತನಾಡಿಲ್ಲ ಎಂದು ಪ್ರಶ್ನಿಸಿದರು.

ಬೇರೆ ಪಕ್ಷದ ಸಮರ್ಥ ಅಭ್ಯರ್ಥಿಗಳು ಪಕ್ಷಕ್ಕೆ ಬಂದರೆ ಟಿಕೆಟ್ ನೀಡಲಾಗು ವುದು ಎಂಬ ಶೋಭಾ ಕರಂದ್ಲಾಜೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸೊರಕೆ, ಇವರು ಇಂದು ಶಾಸಕರ ಖರೀದಿಯಿಂದಲೇ ಅಧಿಕಾರ ನಡೆಸುತ್ತಿದ್ದಾರೆ. ಇವರ ಮನಸ್ಥಿತಿ ಎಲ್ಲರಿಗೂ ಅರ್ಥ ಆಗುತ್ತಿದೆ. ಕೊರೋನ ಹತೋಟಿಗೆ ತರುವಲ್ಲಿ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ. ಇವರಿಗೆ ಜನರ ಸಮಸ್ಯೆ ಗಿಂತ ಅಧಿಕಾರ ಹಿಡಿಯುವುದು ಮುಖ್ಯವಾಗಿದೆ. ಅದಕ್ಕಾಗಿ ಅಪರೇಷನ್ ಕಮಲ, ಕುದುರೆ ವ್ಯಾಪಾರ ಹಾಗೂ ಶಾಸಕರ ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ದೂರಿದರು.

ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿಯನ್ನು ಐದು ಕೆ.ಜಿ.ಗೆ ಇಳಿಸಿರುವ ಬಿಜೆಪಿ ಸರಕಾರ, ಮುಂದೆ ಈ ಯೋಜನೆಯನ್ನೇ ನಿಲ್ಲಿಸುವ ಹುನ್ನಾರ ನಡೆಸುತ್ತಿದೆ. ಆ ಹಿನ್ನೆಲೆಯಲ್ಲಿ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸುವ ಕೆಲಸ ಮಾಡುತ್ತಿದೆ. ಅದಕ್ಕಾಗಿ ಬಿಪಿಎಲ್ ಕಾರ್ಡ್‌ದಾರರಿಂದ ದಂಡ ವಸೂಲಿ ಹಾಗೂ ಪ್ರಕರಣ ದಾಖಲಿಸುವ ಕಾರ್ಯ ನಡೆಸುತ್ತದೆ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News