ರೌಡಿಶೀಟರ್ ಹತ್ಯೆ ಪ್ರಕರಣ : 9 ಮಂದಿ ಬಂಧನ

Update: 2020-11-28 14:04 GMT

ಮಂಗಳೂರು, ನ.28: ಕುದ್ರೋಳಿ ಕರ್ನಲ್ ಗಾರ್ಡನ್ ಬಳಿ ಬುಧವಾರ ತಡರಾತ್ರಿ ನಡೆದ ಬೊಕ್ಕಪಟ್ಣ ರೌಡಿಶೀಟರ್ ಇಂದ್ರಜಿತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಒಂಬತ್ತು ಆರೋಪಿಗಳನ್ನು ಬರ್ಕೆ ಪೊಲೀಸರು ಶನಿವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೋಳೂರು ನಿವಾಸಿಗಳಾದ ಮೋಕ್ಷಿತ್ ಕರ್ಕೆರಾ, ಉಲ್ಲಾಸ್ ಕಾಂಚನ್ (20), ಆಶಿಕ್ ಕರುಣಾಕರ (23), ರಾಕೇಶ್ (28), ಗೌತಮ್ (25), ಕೌಶಿಕ್ (25), ಜಗದೀಶ್ ಕರ್ಕೆರಾ ಯಾನೆ ತಲವಾರ್ ಜಗ್ಗ (53), ಶರಣ್ ಯಾನೆ ಚಾನು (19), ಫರಂಗಿಪೇಟೆ ಅರ್ಕಳ ನಿವಾಸಿ ನಿತಿನ್ ಪೂಜಾರಿ (25) ಬಂಧಿತ ಆರೋಪಿಗಳು.

ನ.25ರಂದು ರಾತ್ರಿಯಿಂದ 26ರ ನಸುಕಿನಜಾವದೊಳಗೆ ಬೋಳೂರಿನ ಕರ್ನಲ್ ಗಾರ್ಡನ್‌ನಲ್ಲಿ ರೌಡಿಶೀಟರ್ ಇಂದ್ರಜಿತ್‌ನನ್ನು ಬರ್ಬರವಾಗಿ ಹತ್ಯೆಗೈಯಲಾಗಿತ್ತು. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬರ್ಕೆ ಪೊಲೀಸರು ತನಿಖೆ ಆರಂಭಿಸಿ ಹಲವರನ್ನು ವಿಚಾರಣೆ ನಡೆಸಿದ್ದರು. ಶಕ್ತಿನಗರ ಸಮೀಪದ ರಾಜೇಶ್ವರಿ ನಗರದಲ್ಲಿ ಈ ಆರೋಪಿಗಳನ್ನು ಶನಿವಾರ ಬೆಳಗ್ಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರತೀಕಾರಕ್ಕೆ ಹತ್ಯೆ 

ಪೊಲೀಸ್ ವಿಚಾರಣೆ ವೇಳೆ ಆರೋಪಿಗಳು ಕೃತ್ಯ ನಡೆಸಿರುವುದನ್ನು ಬಾಯ್ಬಿಟ್ಟಿದ್ದಾರೆ. ಆರು ವರ್ಷಗಳ ಹಿಂದೆ ಪಾಂಡೇಶ್ವರ ಠಾಣೆ ವ್ಯಾಪ್ತಿಯ ಮಂಕಿಸ್ಟಾಂಡ್ ರೌಡಿ ಗ್ಯಾಂಗ್‌ನವರು ಈ ಪ್ರಕರಣದ ಪ್ರಮುಖ ಆರೋಪಿಯಾದ ಜಗದೀಶ್‌ನ ಪುತ್ರ ಸಂಜಯ್ ಯಾನೆ ವರುಣ್ ಎಂಬಾತನನ್ನು ಹೊಯ್ಗೆಬೈಲ್‌ನ ದೈವಸ್ಥಾನವೊಂದರ ಸಮೀಪ ಭೀಕರವಾಗಿ ಹತ್ಯೆಗೈದಿದ್ದರು. ಅದರ ಪ್ರತೀಕಾರ ತೀರಿಸಿಕೊಳ್ಳಲು ಮಂಕಿಸ್ಟಾಂಡ್ ರೌಡಿ ಗ್ಯಾಂಗ್‌ನೊಂದಿಗೆ ಗುರುತಿಸಿಕೊಂಡಿದ್ದ ಇಂದ್ರಜಿತ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು.

ಇಂದ್ರಜಿತ್ ರಾತ್ರಿ ವೇಳೆಯಲ್ಲಿ ತಂಗುತ್ತಿದ್ದ ಕರ್ನಲ್ ಗಾರ್ಡನ್ ಬೋಟ್‌ಯಾರ್ಡ್‌ನಲ್ಲಿ ಆರೋಪಿಗಳು ಪೂರ್ವಯೋಜಿತ ಸಂಚಿ ನಂತೆ ಮಾರಕಾಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News