ಉಗ್ರರ ಪರ ಗೋಡೆ ಬರೆಹ ಪ್ರಕರಣ : ತನಿಖೆ ಚುರುಕು

Update: 2020-11-28 14:18 GMT

ಮಂಗಳೂರು, ನ.28: ನಗರದ ಬಿಜೈ ಸಮೀಪದ ಅಪಾರ್ಟ್‌ಮೆಂಟ್‌ವೊಂದರ ಗೋಡೆ ಮೇಲೆ ಉಗ್ರರ ಪರ ಸಂದೇಶ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗೆ ಮೂರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಆದರೆ ಇದುವರೆಗೆ ಯಾರೊಬ್ಬರ ಬಂಧನವಾಗಿಲ್ಲ. ತನಿಖೆ ಚುರುಕು ಪಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಪಾರ್ಟ್‌ಮೆಂಟ್‌ನ ಆವರಣ ಗೋಡೆಯಲ್ಲಿ ದುಷ್ಕರ್ಮಿಗಳು ಹ್ಯಾಷ್ ಟ್ಯಾಗ್ ಹಾಕಿ ‘ಲಷ್ಕರ್ ಝಿಂದಾಬಾದ್’ ಎಂದು ಬರೆದಿದ್ದರು. ಕೆಲ ಸಮಯದಲ್ಲೇ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂದೇಶದ ವಿರುದ್ಧ ವಿವಿಧ ಸಂಘಟನೆಗಳು, ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದರು.

ಮಂಗಳೂರು ನಗರ ಕೇಂದ್ರ ಉಪವಿಭಾಗ ಎಸಿಪಿ ಎಂ.ಜಗದೀಶ್ ನೇತೃತ್ವದ ತಂಡ, ಕದ್ರಿ ಪೊಲೀಸ್ ಇನ್‌ಸ್ಪೆಕ್ಟರ್ ಸವಿತ್ರ ತೇಜ ನೇತೃತ್ವದ ತಂಡ, ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದ ತಂಡ ಆರೋಪಿಗಳ ಪತ್ತೆ ಕಾರ್ಯಾಚರಣೆಗೆ ಬಲೆ ಬೀಸಿವೆ.

ಉಗ್ರರ ಪರ ಸಂದೇಶ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಒಂದು ತಂಡ ಕದ್ರಿ, ಕೆಪಿಟಿ, ಕದ್ರಿ ಕಂಬಳ, ಕುಂಟಿಕಾನ, ಬಿಜೈ ಸುತ್ತಮುತ್ತಲ ಪ್ರದೇಶದ ಸಿಸಿಬಿ ಕ್ಯಾಮೆರಾ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ನಾನಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಈ ಗೋಡೆ ಬರಹವನ್ನು ಬ್ರಷ್ ಬಳಕೆ ಮಾಡದೆ ಸ್ಪ್ರೇ ಮೆಷಿನ್‌ನಿಂದ ಬರೆದಿರುವ ಸಾಧ್ಯತೆಯಿದೆ. ಬ್ರಷ್ ಬಳಸಿದರೆ ಈ ಬರಹಕ್ಕೆ 30ನಿಮಿಷ ತೆಗೆದುಕೊಂಡರೆ, ಸ್ಪ್ರೇ ಬಳಸಿ 15ನಿಮಿಷದೊಳಗೆ ಮುಗಿಸಬಹುದು. ಈ ಬಗ್ಗೆ ತಂತ್ರಜ್ಞರನ್ನು ಕರೆಸಿ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸಾಮಾನ್ಯವಾಗಿ ಈ ಸ್ಥಳದಲ್ಲಿ ಬೆಳಗ್ಗೆ 3ರಿಂದ 4ಗಂಟೆ ಅವಧಿಯಲ್ಲಿ ಪೊಲೀಸ್ ಗಸ್ತು ತಿರುಗುತ್ತಿದ್ದು, ಇದು ಹೇಗೆ ಸಾಧ್ಯವಾಯಿತು ಎಂಬ ಅನುಮಾನ ಪೊಲೀಸರಲ್ಲೂ ಕಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News