ಆರೆಸ್ಸೆಸ್ ಕೋಮು ಸೌಹಾರ್ದದ ದೊಡ್ಡ ಶತ್ರು : ಬಿ.ಕೆ. ಹರಿಪ್ರಸಾದ್

Update: 2020-11-28 15:32 GMT

ಮಂಗಳೂರು, ನ. 28: ಆರೆಸ್ಸೆಸ್, ಸಂಘಪರಿವಾರ ಕೋಮು ಸೌಹಾರ್ದ ಮತ್ತು ಭಾವೈಕ್ಯತೆಯ ದೊಡ್ಡ ಶತ್ರು ಎಂದು ವಿಧಾನ ಪರಿಷತ್ ಶಾಸಕ ಬಿ.ಕೆ. ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯಿಂದ ನಗರದ ಸಹೋದಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ‘ಸಂಚುಗಾರ ಸಂಘಪರಿವಾರ’ ಪುಸ್ತಕದ ವಿಮರ್ಶೆ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘಪರಿವಾರ ವಿರುದ್ಧ ಎಲ್ಲರೂ ಒಂದಾಗಿ ಹೋರಾಟಬೇಕು. ಈ ಮೂಲಕ ದೇಶ ಉಳಿಸಬೇಕಾಗಿದೆ ಎಂದರು.

ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ಮಾತನಾಡಿ, ಸಂಘಪರಿವಾರವನ್ನು ವಿರೋಧಿಸುವ ಧ್ವನಿಗಳು ಒಂದಾಗಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಭಾರತವನ್ನು ಉಳಿಸಬೇಕೆಂಬ ಉದ್ದೇಶವಿರುವವರು ಫ್ಯಾಸಿಸಮ್ ವಿರುದ್ಧದ ತಂತ್ರಗಾರಿಕೆ ರಚಿಸಬೇಕಿದೆ. ಸದ್ಯ ದೇಶವನ್ನು ಸಮರ್ಪಕವಾಗಿ ಅರಿಯುವ, ಧೈರ್ಯವಂತ ಮತ್ತು ನೈತಿಕತೆ ಇರುವ ನಾಯಕ ತ್ವದ ಅಗತ್ಯತೆಯಿದೆ. ಆ ನಾಯಕತ್ವದ ಮೂಲಕ ಹೊಸ ಬದಲಾವಣೆಯನ್ನು ನಾವು ಕಾಣಬೇಕಿದೆ ಎಂದು ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಪಟ್ಟಾಭಿರಾಮ ಸೋಮಯಾಜಿ ಹಾಗೂ ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಕಾರ್ಯದರ್ಶಿ ಇರ್ಷಾದ್ ಕಾವು ಕಾರ್ಯಕ್ರಮದಲ್ಲಿ ಮಾತನಾಡಿದರು. ವುಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಮ್, ಸಿಎಫ್‌ಐ ಮಂಗಳೂರು ಜಿಲ್ಲಾಧ್ಯಕ್ಷ ಹಸನ್ ಸಿರಾಜ್ ಸಭೆಯಲ್ಲಿ ಉಪಸ್ಥಿತರಿದ್ದರು.

ರಾಜ್ಯ ಸಮಿತಿಯ ಸದಸ್ಯ ಇಮ್ರಾನ್ ಪಿ.ಜೆ. ಸ್ವಾಗತಿಸಿದರು. ಸಮಿತಿಯ ಸದಸ್ಯ ರಿಯಾಝ್ ಕಡಂಬು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News