ಗೋಹತ್ಯೆ, ಲವ್ ಜಿಹಾದ್ ತಡೆಗೆ ಸರ್ಕಾರ ಬದ್ಧ : ಡಾ.ಅಶ್ವಥ ನಾರಾಯಣ

Update: 2020-11-28 15:41 GMT

ಪುತ್ತೂರು : ಗೋಹತ್ಯೆ ನಿಷೇಧ ಹಾಗೂ ಲವ್ ಜಿಹಾದ್ ತಡೆ ವಿಚಾರದಲ್ಲಿ ರಾಜ್ಯ ಸರಕಾರ ಸ್ಪಷ್ಟವಾಗಿದ್ದು, ಈ ಕುರಿತ ಕಾನೂನು ಕೂಡಲೇ ಜಾರಿಗೆ ಬರಲಿದೆ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವಥ ನಾರಾಯಣ್ ಹೇಳಿದರು.

ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಗೋವು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಗೋವಿನ ಹತ್ಯೆ ಯನ್ನು ನಿಷೇಧಿಸುವ ಕಾನೂನು ಕುರಿತದಂತೆ ಸರಕಾರ ಬದ್ಧವಾಗಿದ್ದು, ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರೂ ಈ ಕುರಿತು ತಮ್ಮ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ದೇಶದೆಲ್ಲೆಡೆ ಇದೀಗ ಚರ್ಚೆಯಲ್ಲಿರುವ ಲವ್ ಜಿಹಾದ್ ತಡೆ ಕಾನೂನು ವಿಚಾರವಾಗಿಯೂ ರಾಜ್ಯ ಸರಕಾರ ಬಹಳ ಸ್ಪಷ್ಟತೆಯನ್ನು ಹೊಂದಿದ್ದು, ಈ ಎರಡೂ ಕಾನೂನನ್ನು ಜಾರಿಗೆ ತರಲು ಸ್ವತಹ ಮುಖ್ಯಮಂತ್ರಿಗಳೇ ನಿರ್ಧರಿಸಿದ್ದಾರೆ ಎಂದ ಅವರು ಎರಡೂ ಕಾನೂನುಗಳು ರಾಜ್ಯದಲ್ಲಿ ಶೀಘ್ರವೇ ಜಾರಿಗೆ ಬರಲಿದೆ ಎಂದರು.

ಲಿಂಗಾಯುತ ಅಭಿವೃದ್ಧಿ ಪ್ರಾಧಿಕಾರ ವಿವಾದದ ಕುರಿತು ಮಾತನಾಡಿದ ಅವರು ಎಲ್ಲಾ ಜಾತಿ, ಜನಾಂಗದವರಿಗೆ ಪ್ರಾಧಿಕಾರವನ್ನ ಕೇಳುವ ಹಕ್ಕಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ, ಎಲ್ಲಾ ಜಾತಿ, ಜನಾಂಗಕ್ಕೂ ಪ್ರಾಧಿಕಾರವನ್ನು ಕೊಡುವ ಅಗತ್ಯವಿದೆ ಎಂದ ಅವರು ಸರಕಾರ ಸೀಮಿತ ಕಾಲಾವಧಿಯಲ್ಲಿ ಈ ಕೆಲಸವನ್ನು ಮಾಡಲಿದೆ ಎಂದರು. ಸಿ.ಎಂ. ರಾಜಕೀಯ ಸಲಹೆಗಾರ ಸಂತೋಷ್ ಆತ್ಮಹತ್ಯೆ ಯತ್ನದ ಕುರಿತು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದರು.

ರಾಜ್ಯದಲ್ಲಿ ಕೋವಿಡ್ ಸವಾಲಿನ ನಡುವೆಯೂ ಕಳೆದ ಬಾರಿಯ ಶೈಕ್ಷಣಿಕ ವರ್ಷವನ್ನು ಪೂರ್ಣಗೊಳಿಸಲಾಗಿದೆ. ಇದೀಗ ರಾಜ್ಯದ ಎಲ್ಲಾ ಕಡೆಗಳಲ್ಲಿ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಲಾಗಿದೆ. ಆದರೆ ದೇಶದ ವಿವಿಧ ರಾಜ್ಯಗಳಲ್ಲಿ ಹಿಂದಿನ ವರ್ಷದ ಶೈಕ್ಷಣಿಕ ವರ್ಷವನ್ನೇ ಪೂರ್ಣಗೊಳಿಸಲಾಗಿಲ್ಲ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆನ್ ಲೈನ್ ಹಾಗೂ ಆಫ್ ಲೈನ್ ಶಿಕ್ಷಣದ ಅವಕಾಶವನ್ನೂ ನೀಡಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News