ಗ್ರಾಮ ಮಟ್ಟದ ಅಭಿವೃದ್ಧಿ ಚಿಂತನೆ ದೇಶದ ಅಭಿವೃದ್ಧಿಗೆ ಪೂರಕ-ಡಾ. ಅಶ್ವತ್ಥನಾರಾಯಣ

Update: 2020-11-28 15:48 GMT

ಪುತ್ತೂರು : ಗ್ರಾಮ ಮಟ್ಟದ ಅಭಿವೃದ್ಧಿ ಚಿಂತನೆ ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ. ಗ್ರಾಮ ಪಂಚಾಯತ್‍ಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೂಲಕ ಹಳ್ಳಿಗಳ ಅಭಿವೃದ್ಧಿಗೆ ಪ್ರೇರಣೆಯಾಗಬೇಕು ಈ ನಿಟ್ಟಿನಲ್ಲಿ ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರು ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಅಭಿವೃದ್ಧಿಯ ಅವಕಾಶವನ್ನು ಪಡೆಯಬೇಕು ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದರು.

ಅವರು ಶನಿವಾರ ಪುತ್ತೂರಿನ ಕೊಟೇಚಾ ಸಭಾಂಗಣದಲ್ಲಿ ನಡೆದ ಪುತ್ತೂರು, ಸುಳ್ಯ, ಬೆಳ್ತಂಗಡಿ ಬಿಜೆಪಿ ಗ್ರಾಮಾಂತರ ಮಂಡಲ ಸಮಿತಿಗಳ ಅಪೇಕ್ಷಿತ ಕಾರ್ಯಕರ್ತರಿಗೆ ಏರ್ಪಡಿಸಲಾಗಿದ್ದ ಬಿಜೆಪಿ ಗ್ರಾಮ ಸ್ವರಾಜ್ಯ ಸಮಾವೇಶವನ್ನು ಉದ್ಘಾಟಿಸಿದರು. ಕಮಲ ಸದಾ ಅರಳುವ ಜಿಲ್ಲೆಯೆಂದು ಖ್ಯಾತಿ ಪಡೆದಿರುವ ದ.ಕ. ಜಿಲ್ಲೆಯಲ್ಲಿ ಬಿಜೆಪಿ ಎಲ್ಲಾ ಪಂಚಾಯತ್‍ಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಮುಕ್ತಗೊಳಿಸಬೇಕು ಎಂದರು.

ಬಿಜೆಪಿ ಗೆಲವು ಅನಿವಾರ್ಯ

ಬಿಜೆಪಿ ರಾಜ್ಯಾಧ್ಯಕ್ಷರಾದ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಪ್ರಧಾನಿ ಮೋದಿಯವರ ಆಶಯದಂತೆ ಪ್ರತಿಯೊಂದು ಗ್ರಾಮ ಪಂಚಾಯತ್‍ನ ಒಂದೊಂದು ಬೂತ್‍ಗಳಲ್ಲಿಯೂ ಪಕ್ಷದ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕಾಗಿದೆ. ಇದೀಗ ಪಂಚಾಯತ್‍ಗಳಿಗೆ ಹೆಚ್ಚಿನ ಅನುದಾನ ಲಭಿಸುತ್ತಿದ್ದು, ಪಂಚಾಯತ್‍ಗಳಲ್ಲಿ ಭ್ರಷ್ಟಾಚಾರವಾಗದಂತೆ ನೋಡಿಕೊಳ್ಳಲು ಬಿಜೆಪಿ ಸದಸ್ಯರ ಗೆಲುವು ಅನಿವಾರ್ಯವಾಗಿದೆ. ಬಿಜೆಪಿಯು ರೈತರ ಪರ ಗ್ರಾಮೀಣ ಅಭಿವೃದ್ದಿಯ ಪರ ಕೆಲಸ ಮಾಡುವ ಪಕ್ಷ ವಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಜನಪರ ಚಿಂತನೆಯಿಂದ ಕೆಲಸ ಮಾಡುತ್ತಿದೆ. ಗ್ರಾಮ ಮಟ್ಟದಲ್ಲಿಯೂ ಈ ಚಿಂತನೆ ಅನುಷ್ಠಾನಗೊಳ್ಳಬೇಕಾಗಿದೆ ಎಂದರು. 

ಯೋಜನೆ-ಯೋಚನೆ

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಮೂಲಭೂತ ಸೌಲ್ಯಭ್ಯಗಳ ಯೋಜನೆ ಮತ್ತು ಯೋಚ ನೆಯ ಏಕೈಕ ಸಾಧನ ಗ್ರಾಮ ಪಂಚಾಯತ್ ಆಗಿದ್ದು, ಈ ನಿಟ್ಟಿನಲ್ಲಿ ಬಿಜೆಪಿ ಕಟಿ ಬದ್ದವಾಗಿ ಕೆಲಸ ಮಾಡಬೇಕಾಗಿದೆ. ಮಹಿಳಾ ಮೋರ್ಚಾ ಜೊತೆಗೆ ಉಳಿದ ಎಲ್ಲಾ ಮೋರ್ಚಾಗಳು ಒಟ್ಟಾಗಿ ಶ್ರಮಿಸಿ ಗ್ರಾಪಂನಲ್ಲಿ ಒಳ್ಳೆಯ ತಂಡವನ್ನು ರಚಿಸುವ ಕೆಲಸ ಮಾಡಬೇಕಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮಾತನಾಡಿ ತಮ್ಮ ರಕ್ತವನ್ನೇ ಬೆವರು ಮಾಡಿ ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರಿಗೆ ಗ್ರಾಮ ಪಂಚಾಯತ್ ಚುನಾವಣೆಯು ಕಾರ್ಯಕರ್ತರಿಗೆ ಶಕ್ತಿ ನೀಡಲಿದೆ. ಗ್ರಾಪಂ ಚುನಾವಣೆ ಮುಂದಿನ ವಿಧಾನ ಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ. ದುರ್ಬಲ ಕಾಂಗ್ರೆಸ್‍ಗೆ ಈ ಚುನಾವಣೆ ಅಂತಿಮ ಮೊಳೆ ಹೊಡಯಲು ಪ್ರಮುಖ ಪಾತ್ರ ವಹಿಸಲಿದೆ ಎಂದರು.

ಕೋಲಾರ ಸಂಸದ ಮುನಿಸ್ವಾಮಿ ಮಾತನಾಡಿ ಬಿಜೆಪಿ ಕಾರ್ಯಕರ್ತರನ್ನು ನಾಯಕರನ್ನಾಗಿ ಬೆಳೆಸುವ ಪಕ್ಷವಾಗಿದೆ. ಕಾಂಗ್ರೆಸ್ ಪಕ್ಷವು ಅವರೊಳಗೇ ಕಾಲು ಎಳೆಯುವ ಮೂಲಕ ವಿನಾಶದಂಚಿನಲ್ಲಿದೆ. ದ.ಕ.ಜಿಲ್ಲೆಯಲ್ಲಿ ಎಲ್ಲಾ ಪಂಚಾಯತ್‍ಗಳಲ್ಲಿ ಬಿಜೆಪಿ ಗೆಲುವು ಪಡೆಯುವ ಮೂಲಕ ರಾಜ್ಯಕ್ಕೆ ಮಾದರಿಯಾಗಬೇಕು ಎಂದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಮಾತನಾಡಿ ರಾಜ್ಯದಲ್ಲಿ 5808 ಪಂಚಾಯತ್‍ಗಳಿಗೆ ಚುನಾವಣೆ ನಡೆಯಲಿದ್ದು, 96ಸಾವಿರ ಅಭ್ಯರ್ಥಿಗಳಿದ್ದಾರೆ. ಈ ಪೈಕಿ 80ಸಾವಿರ ಬಿಜೆಪಿ ಅಭ್ಯರ್ಥಿಗಳ ಗೆಲುವು ಸಾಧಿಸುವಂತೆ ಪ್ರಯತ್ನಗಳು ನಡೆಯಲಿದೆ ಎಂದರು.

ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಸಂಸದರು, ಶಾಸಕರು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್‍ಗಳಲ್ಲಿ ಗೆಲುವು ಪಡೆದಿದೆ. ನಮ್ಮ ಹಿರಿಯರ ತ್ಯಾಗ, ಶ್ರಮ, ಜೀವದ ಹಂಗು ತೊರೆದು ನಡೆಸಿದ ಹೋರಾಟ ಇವೆಲ್ಲದರಿಂದ ನಾವಿಂದು ಗೆಲುವು ಪಡೆದುಕೊಂಡಿದ್ದೇವೆ. ಇದೀಗ ಪಂಚಾಯತ್‍ಗಳಿಗೆ ಪ್ರಧಾನಿ ಮೋದಿಯವರು ಹೆಚ್ಚಿನ ಅನುದಾನ ನೀಡುತ್ತಿದ್ದು, ವರ್ಷದಲ್ಲಿ ಒಂದು ಕೋಟಿಯಿಂದ ಎರಡು ಕೋಟಿ ಅನುದಾನ ಸಿಗಲಿದೆ. ಇಷ್ಟೊಂದು ದೊಡ್ಡ ಮೊತ್ತದ ಅನುದಾನ ಸಿಗುವ ಸಂದರ್ಭದಲ್ಲಿ ಎಲ್ಲೆಡೆ ಬಿಜೆಪಿ ಸದಸ್ಯರು ಗೆಲುವು ಪಡೆಯ ಬೇಕಾಗಿದೆ. ಅದಕ್ಕಾಗಿ ವಿಶೇಷ ಕಾರ್ಯಯೋಜನೆ ರೂಪಿಸಬೇಕಾಗಿದೆ ಎಂದರು.

ಗಡಿ ಭಾಗದಲ್ಲಿ ಹೆಚ್ಚಾಗಿರುವ ಲವ್‍ಜೆಹಾದ್, ಗೋಹತ್ಯೆ ಇವುಗಳನ್ನು ತಡೆಯುವ ನಿಟ್ಟಿನಲ್ಲಿ ಲವ್‍ಜಿಹಾದ್ ನಿಷೇಧ, ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರುವ ಬಗ್ಗೆ ನಮ್ಮ ಪ್ರಯತ್ನ ನಡೆಯಲಿದೆ. ಇದಕ್ಕಾಗಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಪಡೆಯುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಶಾಸಕರಾದ ಸಂಜೀವ ಮಠಂದೂರು, ಹರೀಶ್ ಪೂಂಜಾ, ಎಸ್ ಅಂಗಾರ, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಮೀನುಗಾರಿಕಾ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ಮತ್ತಿತರರು ಉಪಸ್ಥಿತರಿದ್ದರು.

ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿದರು. ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ವಂದಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News