ದ.ಕ. ಜಿಲ್ಲಾ ರಂಗಮಂದಿರ ಸಮಿತಿಯಿಂದ ತುರ್ತು ಸಭೆ

Update: 2020-11-28 16:04 GMT

ಮಂಗಳೂರು : ಕಳೆದ ಮೂವತ್ತೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲಾ ರಂಗಮಂದಿರ ಯೋಜನೆಗೆ ಮತ್ತೆ ಚಾಲನೆ ನೀಡಲು ಹಾಗೂ ಆದಷ್ಟು ಬೇಗನೆ ಯೋಜನೆ ಕಾರ್ಯತ ಗೊಳಿಸಲು ಜಿಲ್ಲಾ ರಂಗಮಂದಿರ ಹೋರಾಟ ಸಮಿತಿಯ ತುರ್ತು ಸಭೆಯಲ್ಲಿ ಗೌರವಾಧ್ಯಕ್ಷ ಶ್ರೀ ರಾಮಚಂದ್ರ ಬೈಕಂಪಾಡಿಯವರ ನೇತೃತ್ವದಲ್ಲಿ ತೀರ್ಮಾನಿಸಲಾಯಿತು.

ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಶಶಿರಾಜ್ ಕಾವೂರು ಮಾತನಾಡಿ 'ಈಗಾಗಲೇ ಕರಾವಳಿ ಉತ್ಸವದ ಮೂಲಕ ಸಂಗ್ರಹ ವಾದ ಹಣ ಸೇರಿದಂತೆ ಸುಮಾರು ನಾಲ್ಕೂವರೆ ಕೋಟಿ ಜಿಲ್ಲಾ ರಂಗಮಂದಿರದ ಹೆಸರಲ್ಲಿ ವಿವಿಧ ಖಾತೆಗಳಲ್ಲಿ ಸಂಚಯ ವಾಗಿದ್ದು, ಇತ್ತೀಚೆಗೆ ಸರಕಾರದಿಂದ ರಂಗಮಂದಿರ ಕಟ್ಟುವ ಬಗ್ಗೆ ಸುಮಾರು ಏಳು ಕೋಟಿ ಅನುದಾನ ಮಂಜೂರಾಗಿದ್ದು ಇನ್ನೂ ಕಾಮಗಾರಿ ಆರಂಭವಾಗಿಲ್ಲದ ಕಾರಣ ಆದಷ್ಟು ಶೀಘ್ರ ಕೆಲಸ ಆರಂಭಿಸಬೇಕೆಂದು ಸರಕಾರವನ್ನು ಒತ್ತಾಯಿಸುವ ಬಗ್ಗೆ ಪ್ರಸ್ತಾಪಿಸಿದರು.

'ಇರುವ ಹಣದಲ್ಲೇ ಸಣ್ಣ ರಂಗಮಂದಿರ ನಮಗೆ ಸಾಕು. ಎಂಟು ಕೋಟಿ ಹಣದಲ್ಲೇ ಸುಸಜ್ಜಿತ ರಂಗಮಂದಿರ ಕಟ್ಟಲು ಸಾಧ್ಯವಿದೆ. ಆದುದರಿಂದ ಜಿಲ್ಲಾಧಿಕಾರಿಯವರು, ಮಾನ್ಯ ಶಾಸಕ ಶ್ರೀ ಭರತ್ ಶೆಟ್ಟಿಯವರು, ಶ್ರೀ ವೇದವ್ಯಾಸ ಕಾಮತ್ ರವರು ಮತ್ತು ಉಸ್ತುವಾರಿ ಸಚಿವರಿಗೆ ಈ ಬಗ್ಗೆ ಮನವರಿಕೆ ಮಾಡಬೇಕೆಂದು ಒತ್ತಾಯಿಸಿದರು. 

ನಿಗದಿತ ಜಾಗದಲ್ಲೇ ಎಂಟು ಕೋಟಿ ಬಜೆಟ್ ಮೀರದಂತೆ ಸುಸಜ್ಜಿತ ರಂಗಮಂದಿರವನ್ನು ನಿರ್ಮಿಸಲು ಮನವಿ ನೀಡಲು ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. 

ಸಮಿತಿಯ ಕಾರ್ಯದರ್ಶಿ ಜಗನ್ ಪವಾರ್ ಬೇಕಲ್, ಹಿರಿಯ ಕಲಾವಿದರಾದ ಗೋಪಾಡ್ಕರ್, ಗಣೇಶ್ ಸೋಮಯಾಜಿ, ಪ್ರಕಾಶ್ ಶೆಣೈ, ಕೆ.ಕೆ.ಪೇಜಾವರ, ಮಂಜುಳ ಶೆಟ್ಟಿ, ರಾಜೇಶ್ ಸ್ಕೈಲಾರ್ಕ್, ಮೈಮ್ ರಾಮದಾಸ್, ರಾಕೇಶ್ ಹೊಸಬೆಟ್ಟು, ವಿನೋದ್, ರಾಜೇಶ್, ದಯಾನಂದ ಹಿರೇಮಠ, ಸುಮಂತ್ ಶೆಟ್ಟಿ, ಅವಿನಾಶ್ ಎಸ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News