ಪ್ರಶಾಂತ್ ಭೂಷಣ್ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಅಟಾರ್ನಿ ಜನರಲ್ ಅನುಮತಿ ನಿರಾಕರಣೆ

Update: 2020-11-29 15:05 GMT

ಹೊಸದಿಲ್ಲಿ,ನ.29: ಭಾರತದ ಮುಖ್ಯ ನ್ಯಾಯಾಧೀಶ ಎಸ್.ಎ.ಬೋಬ್ಡೆ ಅವರಿಗೆ ಮಧ್ಯಪ್ರದೇಶ ಸರಕಾರವು ವಿಶೇಷ ಹೆಲಿಕಾಪ್ಟರ್‌ನ್ನು ಒದಗಿಸಿದ್ದನ್ನು ಟೀಕಿಸಿ ಟ್ವೀಟ್ ಮಾಡಿದ್ದಕ್ಕಾಗಿ ಹಿರಿಯ ನ್ಯಾಯವಾದಿ ಹಾಗೂ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಅನುಮತಿಯನ್ನು ನಿರಾಕರಿಸಿದ್ದಾರೆ. ತನ್ಮೂಲಕ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನಗಳ ಕುರಿತು ಇನ್ನೊಂದು ವಿವಾದವನ್ನು ಸದ್ಯಕ್ಕೆ ನಿವಾರಿಸಿದ್ದಾರೆ.

ನ್ಯಾ.ಬೋಬ್ಡೆಯವರನ್ನು ಟೀಕಿಸಿದ್ದ ತನ್ನ ಟ್ವೀಟ್‌ಗಳಿಗಾಗಿ ದೋಷಿಯೆಂದು ಈ ಹಿಂದೆ ನ್ಯಾಯಾಲಯದಿಂದ ಘೋಷಿಸಲ್ಪಟ್ಟಿದ್ದ ಭೂಷಣ್, ಮಧ್ಯಪ್ರದೇಶದ ಪಕ್ಷಾಂತರಿ ಶಾಸಕರ ಅನರ್ಹತೆಯ ಮಹತ್ವದ ಪ್ರಕರಣ ತನ್ನ ಮುಂದಿದ್ದರೂ ಮುಖ್ಯ ನ್ಯಾಯಾಧೀಶರು ಕಾನ್ಹಾ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲು ರಾಜ್ಯ ಸರಕಾರದ ವಿಶೇಷ ಹೆಲಿಕಾಪ್ಟರ್ ಬಳಸಿದ್ದಾರೆ ಎಂದು ಅ.21ರಂದು ಟ್ವೀಟಿಸಿದ್ದರು. ಮಧ್ಯಪ್ರದೇಶ ಸರಕಾರದ ಉಳಿವು ಈ ಪ್ರಕರಣವನ್ನು ಅವಲಂಬಿಸಿದೆ ಎಂದೂ ಅವರು ಸೇರಿಸಿದ್ದರು.

 ಆದರೆ ನ.4ರಂದು ವಿಷಾದವನ್ನು ವ್ಯಕ್ತಪಡಿಸಿ ಇನ್ನೊಂದು ಟ್ವೀಟ್ ಮಾಡಿದ್ದ ಅವರು,‘ಶಿವರಾಜ್ ಸಿಂಗ್ ಚೌಹಾಣ್ ಸರಕಾರದಲ್ಲಿ ಸಚಿವರಾಗಿರುವ ಪಕ್ಷಾಂತರಿ ಶಾಸಕರ ಸ್ಥಾನಗಳಿಗಾಗಿ ನಿನ್ನೆ ಚುನಾವಣೆ ನಡೆದಿದೆ. ಶಿವರಾಜ್ ಸಿಂಗ್ ಅವರ ಸರಕಾರದ ಉಳಿವು ಅವರ ಪುನರಾಯ್ಕೆಯನ್ನು ಅವಲಂಬಿಸಿದೆ,ಮುಖ್ಯ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಈ ಶಾಸಕರಿಗೆ ಸಚಿವ ಸ್ಥಾನವನ್ನು ಪ್ರಶ್ನಿಸಿರುವ ಪ್ರಕರಣದ ತೀರ್ಪನ್ನಲ್ಲ. ನನ್ನ ಟ್ವೀಟ್‌ನಲ್ಲಿಯ ಈ ತಪ್ಪಿಗಾಗಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ ’ಎಂದು ತಿಳಿಸಿದ್ದರು.

 ಭೂಷಣ್ ಅವರು ಮುಖ್ಯ ನ್ಯಾಯಾಧೀಶರ ವೈಯಕ್ತಿಕ ಬದುಕಿಗೆ ಅವರ ಮುಂದಿರುವ ಪ್ರಕರಣದ ನಂಟು ಕಲ್ಪಿಸಿದ್ದಾರೆ ಎಂದು ಹೇಳಿದ್ದ ನ್ಯಾಯವಾದಿ ಸುನಿಲ್ ಸಿಂಗ್ ಅವರು ನ್ಯಾಯಾಂಗ ನಿಂದನೆ ಕ್ರಮಕ್ಕಾಗಿ ಅಟಾರ್ನಿ ಜನರಲ್ ಅನುಮತಿಯನ್ನು ಕೋರಿದ್ದರು.

ಸಿಂಗ್ ಅರ್ಜಿಯ ವಿಚಾರಣೆ ನಡೆಸಿದ ಕೆ.ಕೆ.ವೇಣುಗೋಪಾಲ್ ಅವರು, ಭೂಷಣ್ ಅವರ ಟ್ವೀಟ್‌ನ್ನು ಸಂಪೂರ್ಣ ಅನಗತ್ಯ, ಅನುಚಿತ ಎಂದು ಬಣ್ಣಿಸಿದರಾದರೂ ಅವರು ಈಗಾಗಲೇ ವಿಷಾದವನ್ನು ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಕ್ರಮಕ್ಕೆ ಅನುಮತಿ ನೀಡಲು ನಿರಾಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News