ರೈತರ ಪ್ರತಿಭಟನೆಗಳು ರಾಜಕೀಯ ರಹಿತ: ಅಮಿತ್ ಶಾ

Update: 2020-11-29 16:54 GMT

ಹೈದರಾಬಾದ್, ನ.29: ಕೇಂದ್ರದ ನೂತನ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಗಳ ನಡುವೆಯೇ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, ಈ ಕಾನೂನುಗಳು ರೈತರ ಕಲ್ಯಾಣಕ್ಕಾಗಿಯೇ ಇವೆ. ರೈತರ ಪ್ರತಿಭಟನೆಗಳು ರಾಜಕೀಯ ರಹಿತ ಎಂದು ಅವರು ಬಣ್ಣಿಸಿದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ನೂತನ ಕೃಷಿ ಕಾನೂನುಗಳು ರೈತರ ಕಲ್ಯಾಣದ ಉದ್ದೇಶವನ್ನು ಹೊಂದಿವೆ. ದೀರ್ಘ ಕಾಲದ ಬಳಿಕ ರೈತರು ಬಂಧಿತ ವ್ಯವಸ್ಥೆಯಿಂದ ಹೊರಬರಲಿದ್ದಾರೆ. ರಾಜಕೀಯವಾಗಿ ಈ ಕಾನೂನುಗಳನ್ನು ವಿರೋಧಿಸುವವರು ಹಾಗೆ ಮಾಡಲಿ ಬಿಡಿ. ರೈತರ ಪ್ರತಿಭಟನೆಯು ರಾಜಕೀಯದಿಂದ ಕೂಡಿದೆ ಎಂದು ತಾನು ಎಂದಿಗೂ ಹೇಳಿಲ್ಲ, ಹೇಳುವುದೂ ಇಲ್ಲ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಹೈದರಾಬಾದ್‌ನಲ್ಲಿ ಪಾಕಿಸ್ತಾನಿಗಳು, ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿಗಳು ಅಕ್ರಮವಾಗಿ ವಾಸವಾಗಿದ್ದಾರೆ ಎಂಬ ಆರೋಪಗಳ ಕುರಿತು ಎನ್‌ಡಿಎ ಸರಕಾರವು ಯಾವ ಕ್ರಮವನ್ನು ಕೈಗೊಂಡಿದೆ ಎಂಬ ಹೇಳಿಕೆಗಾಗಿ ಎಐಎಂಐಎಂ ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಅವರನ್ನು ಟೀಕಿಸಿದರು. ಅಕ್ರಮ ವಲಸಿಗರ ವಿರುದ್ಧ ಸರಕಾರವು ಕ್ರಮವನ್ನು ಆರಂಭಿಸಲು ಅವರನ್ನು ತೆರವುಗೊಳಿಸುವಂತೆ ಲಿಖಿತವಾಗಿ ಸೂಚಿಸುವಂತೆ ಉವೈಸಿಯವರನ್ನು ಆಗ್ರಹಿಸಿದ ಶಾ, ‘ನಾನು ಕ್ರಮವೊಂದನ್ನು ಕೈಗೊಂಡರೆ ಅವರು (ಉವೈಸಿ ಮತ್ತು ಇತರ ಪಕ್ಷಗಳು) ಸಂಸತ್ತಿನಲ್ಲಿ ಕೋಲಾಹಲವನ್ನು ಎಬ್ಬಿಸುತ್ತಾರೆ. ನೀವು ಅದನ್ನು ನೋಡಿಲ್ಲವೇ ’ಎಂದು ಪ್ರಶ್ನಿಸಿದರು.

‘ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿಗಳನ್ನು ಉಚ್ಚಾಟಿಸುವಂತೆ ಅವರು ನನಗೆ ಲಿಖಿತ ಪತ್ರವನ್ನು ನೀಡಲಿ, ಆಗ ನಾನು ಕ್ರಮವನ್ನು ಆರಂಭಿಸುತ್ತೇನೆ. ಇದು ಕೇವಲ ಚುನಾವಣಾ ಭಾಷಣವಾಗಬಾರದು. ಸಂಸತ್ತಿನಲ್ಲಿ ಅಕ್ರಮ ವಲಸಿಗರ ಬಗ್ಗೆ ಚರ್ಚೆಗಳು ನಡೆದಾಗೆಲ್ಲ ಯಾರು ಅವರ ಪರವಾಗಿರುತ್ತಾರೆ ಎನ್ನುವುದು ಈ ದೇಶದ ಜನರಿಗೆ ಗೊತ್ತಿದೆ ’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News