ಕೋವಿಡ್ ಲಸಿಕೆಯ ಟ್ರಯಲ್‌ನಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯಿಂದ ಐದು ಕೋ.ರೂ.ಪರಿಹಾರ ಕೋರಿ ಸೆರಮ್ ವಿರುದ್ಧ ದಾವೆ

Update: 2020-11-29 18:21 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ನ.29: ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ಧಿ ಪಡಿಸಿರುವ ಕೋವಿಶೀಲ್ಡ್ ಲಸಿಕೆಯ ಪ್ರಯೋಗಾರ್ಥ ಪರೀಕ್ಷೆಗೆ ತನ್ನನ್ನು ಒಡ್ಡಿಕೊಂಡಿದ್ದ ಚೆನ್ನೈನ 40ರ ಹರೆಯದ ವ್ಯಕ್ತಿಯೋರ್ವ ಈಗ ಕಂಪನಿಯ ವಿರುದ್ಧ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಾನೆ. ತನಗೆ ಲಸಿಕೆ ನೀಡಿದ ಬಳಿಕ ಗಂಭೀರ ನರಶಾಸ್ತ್ರೀಯ ದೌರ್ಬಲ್ಯದಿಂದ ಬಳಲುತ್ತಿದ್ದೇನೆ ಎಂದು ಹೇಳಿರುವ ಆತ, ಕಂಪನಿಯಿಂದ ಐದು ಕೋ.ರೂ.ಪರಿಹಾರಕ್ಕೆ ಬೇಡಿಕೆಯನ್ನು ಮುಂದಿರಿಸಿದ್ದಾನೆ.

ಭಾರತದಲ್ಲಿ ತನ್ನ ಲಸಿಕೆಯ ಟ್ರಯಲ್ ನಡೆಸಲು ಮತ್ತು ತನಗೆ ಅನುಮತಿ ದೊರೆತರೆ ಅದನ್ನು ತಯಾರಿಸಲು ಸೆರಮ್ ಬ್ರಿಟನ್‌ನ ಔಷಧಿ ತಯಾರಿಕೆ ಕಂಪನಿ ಆಸ್ಟ್ರಾಝೆನೆಕಾ ಮತ್ತು ಆಕ್ಸ್‌ಫರ್ಡ್ ವಿವಿಯೊಂದಿಗೆ ಸಹಭಾಗಿತ್ವವನ್ನು ಹೊಂದಿದೆ.

ಲಸಿಕೆಯ ಟ್ರಯಲ್‌ನ್ನು ತಕ್ಷಣ ಸ್ಥಗಿತಗೊಳಿಸಬೇಕು ಮತ್ತು ಅದರ ‘ತಯಾರಿಕೆ ಮತ್ತು ವಿತರಣೆ ’ಯ ಎಲ್ಲ ಯೋಜನೆಗಳನ್ನು ಅಮಾನತುಗೊಳಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮವನ್ನು ಕೈಗೊಳ್ಳುವುದಾಗಿ ಈ ವ್ಯಕ್ತಿ ಎಚ್ಚರಿಕೆಯನ್ನೂ ನೀಡಿದ್ದಾನೆ.

ನ.21ರಂದು ಕಾನೂನು ನೋಟಿಸನ್ನು ಕಳುಹಿಸಲಾಗಿದ್ದು,ಉತ್ತರಕ್ಕಾಗಿ ಕಾಯುತ್ತಿದ್ದೇವೆ. ಮುಂದಿನ ವಾರ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ದಾಖಲಿಸಲೂ ಉದ್ದೇಶಿಸಿದ್ದೇವೆ ಎಂದು ದೂರುದಾರನ ಪರ ವಕೀಲರು ತಿಳಿಸಿದ್ದಾರೆ.

ಆಸ್ಟ್ರಾಝೆನೆಕಾ, ಆಕ್ಸ್‌ಫರ್ಡ್ ವಿವಿ ಮತ್ತು ಆ.1ರಂದು ದೂರುದಾರನಿಗೆ ಲಸಿಕೆಯನ್ನು ನೀಡಲಾಗಿದ್ದ ಚೆನ್ನೈನ ಶ್ರೀರಾಮಚಂದ್ರ ಇನ್‌ಸ್ಟಿಟ್ಯೂಟ್‌ಗೆ ಕಾನೂನು ನೋಟಿಸಿನ ಪ್ರತಿಗಳನ್ನು ಕಳುಹಿಸಲಾಗಿದೆ.

 ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಮತ್ತು ಸಾಂಸ್ಥಿಕ ನೀತಿ ಸಮಿತಿ ಈ ವಿಷಯದ ಬಗ್ಗೆ ತನಿಖೆಯನ್ನು ನಡೆಸುತ್ತಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ರವಿವಾರ ಸಂಜೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News