ಹಳೆಯ ರೋಗಗಳ ಬಗ್ಗೆಯೂ ಇರಲಿ ಜಾಗೃತಿ: ಡಾ. ರಾಮಚಂದ್ರ ಬಾಯರಿ

Update: 2020-11-30 07:28 GMT

ಮಂಗಳೂರು, ನ. 30: ಹೊಸ ಸಾಂಕ್ರಾಮಿಕ ರೋಗಗಳ ಜತೆಯಲ್ಲೇ ಹಲವಾರು ವರ್ಷಗಳಿಂದ ಜನರನ್ನು ಬಾಧಿಸುತ್ತಾ ಬಂದಿರುವ ಹಳೆಯ ರೋಗಗಳ ಕುರಿತಂತೆಯೂ ಜಾಗೃತಿ ಅಗತ್ಯ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿಂದು ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದ ಕುರಿತಂತೆ ದ.ಕ. ಜಿಲ್ಲೆಯ ಪ್ರಗತಿ, ಕಾರ್ಯಕ್ರಮಗಳ ಕುರಿತಂತೆ ಅವರು ಮಾಹಿತಿ ನೀಡಿದರು.

ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನ ಕಾರ್ಯಕ್ರಮದ ಅಂಗವಾಗಿ ಡಿಸೆಂಬರ್ ತಿಂಗಳನ್ನು ಸಕರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ರಾತ್ರಿ ವೇಳೆ ಜ್ವರ, ಬೆವರುವುದು, ಹಸಿವಾಗದಿರುವುದು, ತೂಕ ಇಳಿಕೆ, ಕಫದಲ್ಲಿ ರಕ್ತ ಮೊದಲಾದ ಕ್ಷಯರೋಗದ ಸಾಮಾನ್ಯ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಸಮೀಪದ ಸರಕಾರಿ ಆಸ್ಪತ್ರೆಗಳಲ್ಲಿ ಕಫ ಪರೀಕ್ಷೆ ಮಾಡಿಕೊಳ್ಳಬೇಕೆಂದು ಡಾ. ರಾಮಚಂದ್ರ ಬಾಯರಿ ಹೇಳಿದರು.

ಕ್ಷಯ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಸರಕಾರಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ಡಿಆರ್‌ಟಿಬಿ ಸೆಂಟರ್ ಕಾರ್ಯಾಚರಿಸುತ್ತಿದೆ. ಚಿಕಿತ್ಸೆಗೆ ಆರಂಭಕ್ಕೆ ಮೊದಲು ವಿವಿಧ ಪರೀಕ್ಷೆಗಳನ್ನು ನಡೆಸಿ ಸೆಂಟರ್‌ನಲ್ಲಿ ದಾಖಲು ಮಾಡಿಕೊಳ್ಳಲಾಗುತ್ತದೆ. ಕ್ಷಯ ರೋಗಿಗಳ ಚಿಕಿತ್ಸಾ ಪೂರ್ವದ ಪರೀಕ್ಷೆಗಳ ನಂತರ ಪ್ರಾರಂಭಿಕ ಹಂತದ ಸೂಕ್ತ ಔಷಧಿ ನೀಡಿ ಒಂದು ವಾರದಲ್ಲಿ ರೋಗಿಯನ್ನು ಸೆಂಟರ್ ‌ನಿಂದ ಬಿಡುಗಡೆಗೊಳಿಸಲಾಗುತ್ತದೆ. ಬಳಿಕ ರೋಗಿಯ ಮನೆ ಅಥವಾ ವಾಸಸ್ಥಾನಕ್ಕೆ ಸಮೀಪದ ಆರೋಗ್ಯ ಕೇಂದ್ರಗಲಲ್ಲಿ ಔಷಧಿ ಒದಗಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ರೋಗಿಗಳಿಗೆ ಚಿಕಿತ್ಸೆ ಹಾಗೂ ತಪಾಸಣೆ ಉಚಿತವಾಗಿದ್ದು, ಕ್ಷಯ ರೋಗಿಗಳ ಪೌಷ್ಠಿಕ ಆಹಾರದ ಖರ್ಚಿಗಾಗಿ ಮಾಸಿಕ 500 ರೂ.ನಂತೆ ಆರು ತಿಂಗಳ ಕಾಲ ರೋಗಿ ಅಥವಾ ಸಂಬಂಧಪಟ್ಟವರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಇಲಾಖೆಯ ಸಹಾಯವಾಣಿ 104ನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಬದ್ರುದ್ದೀನ್, ಮನೋಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News