ಈಡಿ, ಸಿಬಿಐಯನ್ನು ಗಡಿ ಪ್ರದೇಶಗಳಿಗೆ ಕಳುಹಿಸಿ:ಕೇಂದ್ರಕ್ಕೆ ಶಿವಸೇನೆ ಸಲಹೆ

Update: 2020-11-30 09:29 GMT

ಮುಂಬೈ : ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಲು ಯತ್ನಿಸುವ ಉಗ್ರರನ್ನು ಸದೆ ಬಡೆಯಲು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಯನ್ನು ಗಡಿ ಪ್ರದೇಶಕ್ಕೆ ಕಳುಹಿಸಬೇಕು ಎಂದು ಶಿವಸೇನೆ ತನ್ನ ಮುಖವಾಣಿ `ಸಾಮ್ನಾ'ದಲ್ಲಿ ಹೇಳಿದೆ.

ವಿಪಕ್ಷ  ಆಡಳಿತವಿರುವ ರಾಜ್ಯಗಳಲ್ಲಿ ಎದುರಾಳಿಗಳನ್ನು ಮಟ್ಟ ಹಾಕಲು ಕೇಂದ್ರೀಯ ತನಿಖಾ ಏಜನ್ಸಿಗಳನ್ನು ಬಳಸುತ್ತಿರುವ ಕುರಿತಂತೆ ಪ್ರತಿಕ್ರಿಯಿಸಿದ ಶಿವಸೇನೆ, ``ಈಡಿ  ಹಾಗೂ ಸಿಬಿಐ ಬಳಸಿ ವಿಪಕ್ಷಗಳನ್ನು ತಡೆಯಬಹುದು ಎಂದು ಸರಕಾರ ಅಂದುಕೊಂಡಿದೆ. ಆದುದರಿಂದ ಈ ಏಜನ್ಸಿಗಳಿಗೆ ತಮ್ಮ ಪೌರುಷವನ್ನು  ಸಾಬೀತು ಪಡಿಸುವ ಅವಕಾಶ ಒದಗಿಸಬೇಕು. ಪ್ರತಿ ಬಾರಿ ಬುಲೆಟ್ ಕೆಲಸ ಮಾಡದು. ಉಗ್ರರು ಜಮ್ಮು ಕಾಶ್ಮೀರ ಗಡಿ ಮೂಲಕ ಪ್ರವೇಶಿಸುತ್ತಿದ್ದರೆ  ದಿಲ್ಲಿಯ ಗಡಿಗಳಲ್ಲಿ ನಮ್ಮ ರೈತರನ್ನು   ಉಗ್ರರೆಂದು ಕರೆಯಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈಡಿ ಹಾಗೂ ಸಿಬಿಐಯನ್ನು ಗಡಿಗಳಿಗೆ ಕಳುಹಿಸಬೇಕು, ಬೇರೆ ಆಯ್ಕೆಯಿಲ್ಲ,'' ಎಂದು ಶಿವಸೇನೆ ಹೇಳಿದೆ.

ದಿಲ್ಲಿ ಸಮೀಪ ಪ್ರತಿಭಟನೆ ನಡೆಸುತ್ತಿರುವ ರೈತರ ಕುರಿತಂತೆ ಸರಕಾರ ತಳೆದಿರುವ ನಿಲುವನ್ನು ಟೀಕಿಸಿದ ಶಿವಸೇನೆ ``ಉತ್ತರ ಭಾರತದಾದ್ಯಂತ ಚಳಿಗಾಳಿ ಬೀಸುತ್ತಿರುವಂತಹ ಸಂದರ್ಭದಲ್ಲಿ ರೈತರ ಮೇಲೆ ಜಲಫಿರಂಗಿಗಳನ್ನು ಬಳಸುವುದು  ಕ್ರೂರತನ,'' ಎಂದು ಹೇಳಿದೆ.

 ಗುಜರಾತಿನಲ್ಲಿ  ಕೇಂದ್ರದ ಬಿಜೆಪಿ ಸರಕಾರ ಸ್ಥಾಪಿಸಿರುವ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ  ದೈತ್ಯ ಪ್ರತಿಮೆಯನ್ನು ಉಲ್ಲೇಖಿಸಿದ ಶಿವಸೇನೆ, ಭಾರತದ ಮೊದಲ ಗೃಹ ಸಚಿವರಾಗಿದ್ದ ಪಟೇಲ್ ಅವರು ಬ್ರಿಟಿಷರ ವಿರುದ್ಧ ಹಲವು ರೈತರ ಹೊರಾಟಗಳನ್ನು ಸಂಘಟಿಸಿದ್ದನ್ನು ನೆನಪಿಸಿದೆ. ``ರೈತರನ್ನು ನೋಡಿಕೊಳ್ಳಲಾಗುತ್ತಿರುವ ರೀತಿಯನ್ನು ನೋಡಿ ಅವರ ಪ್ರತಿಮೆ ಈಗ ಕಣ್ಣೀರು ಸುರಿಸುತ್ತಿರಬಹುದು,'' ಎಂದು ಸಾಮ್ನಾದ ಸಂಪಾದಕೀಯದಲ್ಲಿ ಬರೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News