ದಿಲ್ಲಿಯಲ್ಲಿ 71 ವರ್ಷಗಳ ನಂತರ ಕನಿಷ್ಠ ಉಷ್ಣಾಂಶ ದಾಖಲೆ

Update: 2020-11-30 12:11 GMT

ಹೊಸದಿಲ್ಲಿ : ಕಳೆದ 71 ವರ್ಷಗಳಲ್ಲಿಯೇ ಈ ವರ್ಷದ ನವೆಂಬರ್ ತಿಂಗಳಲ್ಲಿ ರಾಜಧಾನಿ ದಿಲ್ಲಿಯಲ್ಲಿ ಚಳಿಯ ಪ್ರಮಾಣ ಗರಿಷ್ಠವಾಗಿತ್ತು ಹಾಗೂ  ಈ ಬಾರಿ  ಕನಿಷ್ಠ  ಉಷ್ಣಾಂಶ 10.2 ಡಿಗ್ರಿ ಸೆಲ್ಸಿಯಸ್‍ನಷ್ಟು ಇಳಿಕೆಯಾಗಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಈ ಹಿಂದೆ ನವೆಂಬರ್ 1949ರಲ್ಲಿ ದಿಲ್ಲಿಯಲ್ಲಿ 10.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿತ್ತು.  ನವೆಂಬರ್ ತಿಂಗಳಿನಲ್ಲಿ ದಿಲ್ಲಿಯ ಸರಾಸರಿ ಕನಿಷ್ಠ ಉಷ್ಣಾಂಶ 1938ರಲ್ಲಿ 9.6 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, 1931ರಲ್ಲಿ 9 ಡಿಗ್ರಿ ಸೆಲ್ಸಿಯಸ್, 1930ಯಲ್ಲಿ 8.9 ಡಿಗ್ರಿ ಸೆಲ್ಸಿಯಸ್ ಆಗಿತ್ತು.

ಸಾಮಾನ್ಯವಾಗಿ ನವೆಂಬರ್ ತಿಂಗಳ ಸರಾಸರಿ ಸಾಮಾನ್ಯ ಕನಿಷ್ಠ ಉಷ್ಣಾಂಶ 12.9 ಡಿಗ್ರಿ ಸೆಲ್ಸಿಯಸ್‍ನಷ್ಟಿರುತ್ತದೆ.

ಕಳೆದ ವರ್ಷದ ಸರಾಸರಿ ಕನಿಷ್ಠ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ  2018ರಲ್ಲಿ 13.4 ಡಿಗ್ರಿ ಸೆಲ್ಸಿಯಸ್  ಹಾಗೂ 2017 ಮತ್ತು 2016ರಲ್ಲಿ 12.8 ಡಿಗ್ರಿ ಸೆಲ್ಸಿಯಸ್ ಆಗಿತ್ತು.

ಸಾಮಾನ್ಯವಾಗಿ ಕನಿಷ್ಠ ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್ ಹಾಗೂ ಅದಕ್ಕಿಂತ ಕೆಳಗೆ ಕುಸಿದಾಗ ಅಥವಾ ಎರಡು ಸತತ ದಿನ ಉಷ್ಣಾಂಶ 4.5 ಡಿಗ್ರಿಯಷ್ಟು ಕಡಿಮೆಯಾದಾಗ ಚಳಿ ಗಾಳಿ ಎಂದು  ಐಎಂಡಿ ಘೋಷಿಸುತ್ತದೆ.

ಸೋಮವಾರ ದಿಲ್ಲಿಯ ಕನಿಷ್ಠ ಉಷ್ಣಾಂಶ 6.9 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಈ ತಿಂಗಳಿನಲ್ಲಿ ಹತ್ತು ದಿನ ದಿಲ್ಲಿಯ ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್‍ಗಿಂತ ಕಡಿಮೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News