×
Ad

ರೈತರ ಪ್ರತಿಭಟನೆಗೆ ಖಲಿಸ್ತಾನಿ, ಮಾವೋವಾದಿಗಳ ನಂಟಿದೆ ಎಂದ ಬಿಜೆಪಿಯ ಇನ್ನೊಬ್ಬ ನಾಯಕ!

Update: 2020-11-30 18:19 IST

ಹೊಸದಿಲ್ಲಿ: ಹೊಸದಾಗಿ ಜಾರಿಗೆ ಬಂದಿರುವ ಮೂರು ಕೃಷಿ ಕಾನೂನುಗಳ ವಿರುದ್ದ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಖಲಿಸ್ತಾನಿ ಹಾಗೂ ಮಾವೋವಾದಿ’ ನಂಟಿದೆ ಎಂದು ಭಾರತೀಯ ಜನತಾ ಪಕ್ಷದ ಮಾಹಿತಿ ತಂತ್ರಜ್ಞಾನ ಕೋಶದ ಮುಖ್ಯಸ್ಥ  ಅಮಿತ್ ಮಾಳವೀಯ ಆರೋಪಿಸಿದ್ದಾರೆ.

ಆದಾಗ್ಯೂ ಅವರು ತಮ್ಮ ಆರೋಪವನ್ನು ಬೆಂಬಲಿಸುವ ಯಾವುದೇ ಪುರಾವೆಗಳನ್ನು ಒದಗಿಸಲಿಲ್ಲ.

 ಅರವಿಂದ್ ಕೇಜ್ರಿವಾಲ್ ನೇತೃತ್ವದ ದಿಲ್ಲಿ ಸರಕಾರ ನವೆಂಬರ್ 23 ರಂದು ನೂತನ ಕೃಷಿ ಕಾನೂನುಗಳ ಕುರಿತು ಅಧಿಸೂಚನೆ ನೀಡಿದೆ. ಅದನ್ನು ಅನುಷ್ಠಾನಕ್ಕೆ ತರಲು ಆರಂಭಿಸಿದೆ. ಇದೀಗ ಖಲಿಸ್ತಾನಿಗಳು ಹಾಗೂ ಮಾವೋವಾದಿಗಳು ಕೃಷಿ ಕಾನೂನುಗಳನ್ನು ವಿರೋಧಿಸಲು ಮುಂದಾಗಿವೆ. ಕೇಜ್ರಿವಾಲ್ ದಿಲ್ಲಿಯಲ್ಲಿ ಸುಡುವ ಅವಕಾಶವನ್ನು ಎದುರು ನೋಡುತ್ತಿದ್ದಾರೆ.  ಇದು ಎಂದಿಗೂ ರೈತರ ಕುರಿತಾಗಿಲ್ಲ. ಇದು ಕೇವಲ ರಾಜಕೀಯ… ಎಂದು ದಿಲ್ಲಿ ಸರಕಾರದ ಕೃಷಿ ಕಾನೂನುಗಳ  ಅನುಷ್ಠಾನದ ಗಜೆಟ್ ಅಧಿಸೂಚನೆಯ ಚಿತ್ರಗಳೊಂದಿಗೆ ಮಾಳವೀಯ ಟ್ವೀಟಿಸಿದ್ದಾರೆ.

ರೈತರ ಪ್ರತಿಭಟನೆಯಲ್ಲಿ ಖಲಿಸ್ತಾನಿ ಬೆಂಬಲಿಗರ ಕೈವಾಡವಿದೆ ಎಂದು ಆರೋಪಿಸುತ್ತಿರುವ ಬಿಜೆಪಿಯ ಎರಡನೇ ನಾಯಕ ಮಾಳವೀಯ. ಶನಿವಾರದಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಇದೇ ರೀತಿಯ ಆರೋಪ ಮಾಡಿ ವಿವಾದಕ್ಕೆ ಸಿಲುಕಿದ್ದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ರವಿವಾರ ಹೈದರಾಬಾದ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, "ರೈತರ ಪ್ರತಿಭಟನೆಯು ರಾಜಕೀಯ ರಹಿತವಾಗಿದೆ. ರೈತರ ಪ್ರತಿಭಟನೆಯು ರಾಜಕೀಯ ಪ್ರೇರಿತ ಎಂದು ನಾನು ಎಂದೂ ಹೇಳಿಲ್ಲ. ಹಾಗೆ ಹೇಳುವುದೂ ಇಲ್ಲ'' ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News