ಬಿಜೆಪಿಯ ಮೈತ್ರಿ ಕಡಿದುಕೊಳ್ಳುವ ಬೆದರಿಕೆ ಹಾಕಿದ ಇನ್ನೊಂದು ಪಕ್ಷ

Update: 2020-11-30 14:23 GMT

ಹೊಸದಿಲ್ಲಿ: ಕೃಷಿ ಕಾನೂನುಗಳಿಗೆ ಸಂಬಂಧಿಸಿ ಶಿರೋಮಣಿ ಅಕಾಲಿದಳ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟವನ್ನು ತ್ಯಜಿಸಿದ ಬಳಿಕ ರಾಜಸ್ಥಾನದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ (ಆರ್ ಎಲ್ ಪಿ) ಕೂಡ ಕೃಷಿ ಕಾನೂನುಗಳನ್ನು ಮುಂದಿಟ್ಟುಕೊಂಡು ಮೈತ್ರಿ ಕಡಿದುಕೊಳ್ಳುವ ಬೆದರಿಕೆ ಹಾಕಿದೆ.

ಆರ್ ಎಲ್ ಪಿ ಪಕ್ಷದ ಸಂಸದ ಹನುಮಾನ್ ಬನಿವಾಲ್ ರೈತರ ತೀವ್ರ ಪ್ರತಿಭಟನೆಗೆ ಕಾರಣವಾಗಿರುವ ಮೂರು ಕೃಷಿ ಕಾನೂನುಗಳನ್ನು ತಕ್ಷಣವೇ ರದ್ದುಪಡಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ.

ಬಿಜೆಪಿನೇತೃತ್ವದ ಕೇಂದ್ರ ಸರಕಾರವು ಗುರುವಾರದ ತನಕ ಕಾಯದೇ ರೈತರೊಂದಿಗೆ ತಕ್ಷಣವೇ  ಮಾತುಕತೆ ನಡೆಸಬೇಕು ಎಂದು ಬನಿವಾಲ್ ಆಗ್ರಹಿಸಿದರು.

ರೈತರ ಆಂದೋಲನಕ್ಕೆ ದೇಶಾದ್ಯಂತ ವ್ಯಕ್ತವಾಗುತ್ತಿರುವ ಭಾವನೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ತಕ್ಷಣವೇ ಮೂರು ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯಬೇಕು. ಕೇಂದ್ರ ಸರಕಾರವು ಸ್ವಾಮಿನಾಥನ್ ವರದಿಯನ್ನು ಅನುಷ್ಠಾನಕ್ಕೆ ತರಬೇಕು. ತಕ್ಷಣವೇ ದಿಲ್ಲಿಯಲ್ಲಿ ರೈತರೊಂದಿಗೆ ಮಾತುಕತೆ ನಡೆಸಬೇಕು ಎಂದು ಬನಿವಾಲ್ ಗೃಹ ಸಚಿವ ಅಮಿತ್ ಶಾ ಅವರನ್ನು ಉದ್ದೇಶಿಸಿ ಟ್ವೀಟಿಸಿದ್ದಾರೆ.

ನಮ್ಮಪಕ್ಷ ರೈತರು ಹಾಗೂ ಸೈನಿಕರ ಬೆಂಬಲದಿಂದ ಅಧಿಕಾರಕ್ಕೆ ಬಂದಿದೆ. ಕೃಷಿ ಕಾನೂನುಗಳ ಕುರಿತು ಪ್ರಾಮಾಣಿಕ ಕ್ರಮ ಕೈಗೊಳ್ಳದಿದ್ದರೆ ರೃತರ ಹಿತದೃಷ್ಟಿಯಿಂದ ಎನ್ ಡಿಎ ಯಿಂದ ಹೊರಬರುವುದು ಅನಿವಾರ್ಯವಾಗುತ್ತದೆ ಎಂದು ಬನಿವಾಲ್ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News