ಎತ್ತರ 3ರಿಂದ 4 ಅಡಿ, ಸಾಧನೆ ಆಗಸದೆತ್ತರ !

Update: 2020-11-30 15:06 GMT

► ಟೈಲರ್ ತಂದೆಯ ಇಬ್ಬರು ಪುತ್ರಿಯರ ಅಸಾಮಾನ್ಯ ಸಾಧನೆ

ಮುಂಬೈ : ಇದ್ರಿಸಿ ಸೋದರಿಯರೆಂದೇ ಹೆಚ್ಚಿನವರು ಗುರುತಿಸುವ ಝುಬೈದಾ (23)  ಹಾಗೂ ಹುಮೈರಾ (22) ತಮ್ಮ ನಿವಾಸವಿರುವ ನಾಗ್ಪಾಡ ಸುತ್ತಮುತ್ತಲಿನಲ್ಲಿ ಇದೀಗ  ಸೆಲೆಬ್ರಿಟಿಗಳಾಗಿಬಿಟ್ಟಿದ್ದಾರೆ.  ಕಾರಣ, ಇಬ್ಬರೂ ನೀಟ್‍ನಲ್ಲಿ ಉತ್ತೀರ್ಣರಾಗಿ ವೈದ್ಯಕೀಯ ಕಾಲೇಜಿಗೆ ದಾಖಲಾತಿ ಪಡೆದಿದ್ದಾರೆ. ಇದರಲ್ಲಿ ವಿಶೇಷವಿಲ್ಲದಿದ್ದರೂ ಈ ಸೋದರಿಯರಿಬ್ಬರೂ ಕುಬ್ಜರಾಗಿದ್ದಾರೆ. ಝುಬೈದಾ 3.5 ಅಡಿ ಎತ್ತರವಿದ್ದರೆ ಹುಮೈರಾ 3.9 ಅಡಿ ಎತ್ತರವಿದ್ದಾರೆ.  ಹುಮೈರಾಗೆ ಟೋಪಿವಾಲ ನಾಯರ್ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ದೊರಕಿದ್ದರೆ ಝುಬೈದಾಗೆ ಜಲಗಾಂವ್‍ನಲ್ಲಿನ ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ದೊರಕಿದೆ.

ವೃತ್ತಿಯಲ್ಲಿ ಟೈಲರ್ ಆಗಿರುವ ತಂದೆ ಅಹ್ಸಾನುಲ್ಲಾ, ತಾಯಿ ರುಕ್ಸರ್ ಹಾಗೂ ಮೂವರು ಇತರ ಸೋದರ, ಸೋದರಿಯರೊಂದಿಗೆ  ಕಝಿಪುರಾದಲ್ಲಿ ನೆಲೆಸಿರುವ ಈ ಸೋದರಿಯರು ಖಿದ್ಮತ್ ಚಾರಿಟೇಬಲ್ ಟ್ರಸ್ಟ್ನ ಅಶ್ಫಖ್ ಮೂಸಾ ಅವರನ್ನು ಕಳೆದ ವರ್ಷ ಭೇಟಿಯಾದ ನಂತರ ಅವರ ಭವಿಷ್ಯದ ದಿಕ್ಕೇ ಬದಲಾಗಿತ್ತು.

ನಾಗ್ಪಾಡಾದ  ಪಿ ಟಿ ಮನೆ ಗಾರ್ಡನ್ ಎಂಬಲ್ಲಿ ಸ್ಥಳೀಯ ಎನ್‍ಜಿಒ ನಡೆಸುವ ಡಿಸ್ಪೆನ್ಸರಿಗೆ ಇಬ್ಬರೂ ತಮ್ಮ ಅಜ್ಜಿಗೆ ಔಷಧಿ ತರಲೆಂದು ಹೋಗುತ್ತಿದ್ದರು. ಆತ ಅಲ್ಲಿದ್ದ ಅಶ್ಫಕ್ ಈ ಸೋದರಿಯರ ಜತೆ ಮಾತನಾಡಿದಾಗ  ಇಬ್ಬರೂ  ಹತ್ತಿರದ ಕಾಲೇಜಿನಲ್ಲಿ  ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿರುವುದನ್ನು ಹಾಗೂ ವೈದ್ಯರಾಗಬೇಕೆಂಬ ಕನಸನ್ನು ಕೈಬಿಟ್ಟಿರುವ ಕುರಿತು  ತಿಳಿದು ಬಂದಿತ್ತು.

ನೀಟ್‍ನಲ್ಲಿ  ``ಭಿನ್ನ ಚೇತನರು'' ವಿಭಾಗದಲ್ಲಿ ಇವರಂತಹ ಕುಬ್ಜತೆ ಸಮಸ್ಯೆಯಿರುವವರಿಗೆ ಅವಕಾಶವಿದೆಯೆಂದು ಅಶ್ಫಕ್ ಮೂಲಕ  ತಿಳಿದ ನಂತರ ಇಬ್ಬರೂ ಘಾಟ್ ಕೋಪರ್ ನ ಕೋಚಿಂಗ್ ಸೆಂಟರಿಗೆ ತೆರಳಿದ್ದರು. ಆರಂಭದಲ್ಲಿ ಅಲ್ಲಿ ಅವರಿಗೆ ಪ್ರವೇಶ ನಿರಾಕರಿಸಲಾಯಿತಾದರೂ ಸಂಸ್ಥೆಯ ಕೋಟಾದಲ್ಲಿರುವ ಮುಖ್ಯ ಕಚೇರಿಗೆ ಅವರ ಛಾಯಾಚಿತ್ರಗಳನ್ನು ಕಳುಹಿಸಿದ ನಂತರ ಶೇ .60ರಷ್ಟು ಶುಲ್ಕ ರಿಯಾಯಿತಿಯೊಂದಿಗೆ ಅವರಿಗೆ ಪ್ರವೇಶ ದೊರಕಿತ್ತು.

ಅವರ ಶ್ರಮದ ಫಲವೆಂಬಂತೆ ನೀಟ್‍ನಲ್ಲಿ ಉತ್ತೀರ್ಣರಾಗಿ ಇಬ್ಬರೂ  ವೈದ್ಯಕೀಯ ಕಾಲೇಜಿಗೆ ಸೇರ್ಪಡೆಗೊಂಡಿಡ್ದಾರೆ.  ಇಬ್ಬರು ಸೋದರಿಯರೂ ಐದು ವರ್ಷದ ನಂತರ ದೈಹಿಕವಾಗಿ ಎತ್ತರಕ್ಕೆ ಬೆಳೆಯದೇ ಇರಲು ಕೆಲವೊಂದು ಹಾರ್ಮೋನುಗಳ ಕೊರತೆ ಕಾರಣ ಎಂದು ಅವರ ಹೆತ್ತವರು ಹೇಳುತ್ತಾರಲ್ಲದೆ ಅವರ ಚಿಕಿತ್ಸೆಗೆ ರೂ 11 ಲಕ್ಷ ತಗಲಬಹುದೆಂದೂ ಹಿಂದೆ ವೈದ್ಯರೊಬ್ಬರು ಹೇಳಿದ್ದನ್ನು ನೆನಪಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News