ಪರಮಾಣು ವಿಜ್ಞಾನಿ ಹತ್ಯೆಯಲ್ಲಿ ಬಳಸಲಾದ ಆಯುಧ ತಯಾರಾಗಿದ್ದು ಇಸ್ರೇಲ್‌ನಲ್ಲಿ

Update: 2020-11-30 16:29 GMT

ಟೆಹರಾನ್ (ಇರಾನ್), ನ. 30: ಇರಾನ್‌ನ ಉನ್ನತ ಪರಮಾಣು ವಿಜ್ಞಾನಿ ಮೊಹ್ಸಿನ್ ಫಕ್ರಿಝಾದೆಯ ಹತ್ಯೆಯಲ್ಲಿ ಬಳಸಲಾಗಿರುವ ಆಯುಧವನ್ನು ಇಸ್ರೇಲ್‌ನಲ್ಲಿ ಉತ್ಪಾದಿಸಲಾಗಿದೆ ಎಂದು ಇರಾನ್‌ನ ಇಂಗ್ಲಿಷ್ ಭಾಷೆಯ ಸುದ್ದಿವಾಹಿನಿ ‘ಪ್ರೆಸ್ ಟಿವಿ’ ಸೋಮವಾರ ವರದಿ ಮಾಡಿದೆ.

‘‘ಭಯೋತ್ಪಾದಕ ಕೃತ್ಯ (ಫಖ್ರಿಝಾದೆ ಹತ್ಯೆಯಾಗಿರುವ ಸ್ಥಳ) ನಡೆದ ಸ್ಥಳದಿಂದ ಪತ್ತೆಹಚ್ಚಲಾದ ಆಯುಧದಲ್ಲಿ ಇಸ್ರೇಲ್ ಸೇನಾ ಉದ್ದಿಮೆಯೊಂದರ ಲಾಂಛನ ಮತ್ತು ವಿವರಗಳಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿವಾಹಿನಿ ತಿಳಿಸಿದೆ.

 ಪ್ರೆಸ್ ಟಿವಿಯ ವರದಿಗಿಂತಲೂ ಮೊದಲು ಸೋಮವಾರ ‘103 ಎಫ್‌ಎಮ್’ ಆಕಾಶವಾಣಿಯೊಂದಿಗೆ ಮಾತನಾಡಿದ ಇಸ್ರೇಲ್ ಗುಪ್ತಚರ ಸಚಿವ ಎಲಿ ಕೋಹನ್, ಇರಾನ್ ಪರಮಾಣು ವಿಜ್ಞಾನಿಯ ಹತ್ಯೆಗೆ ಯಾರು ಕಾರಣ ಎನ್ನುವುದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

ಶುಕ್ರವಾರ ಟೆಹರಾನ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಫಖ್ರಿಝಾದೆಯ ಕಾರಿನ ಮೇಲೆ ಹಂತಕರು ಹೊಂಚು ದಾಳಿ ನಡೆಸಿದ್ದರು. ಹಂತಕರು ಕಾರಿನ ಮೇಲೆ ಗುಂಡಿನ ಸುರಿಮಳೆಗೈದಿದ್ದು, ಗಂಭೀರ ಗಾಯಗೊಂಡ ಪರಮಾಣು ವಿಜ್ಞಾನಿ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಪರಮಾಣು ವಿಜ್ಞಾನಿಯ ಹತ್ಯೆಗೆ ಇರಾನ್ ಪ್ರತೀಕಾರ ತೀರಿಸುವುದು ಎಂದು ರಕ್ಷಣಾ ಸಚಿವರು ಪ್ರತಿಜ್ಞೆ ಮಾಡಿದ್ದಾರೆ. ಫಖ್ರಿಝಾದೆಯ ಹತ್ಯೆಗೆ ತನ್ನ ದೀರ್ಘಕಾಲೀನ ಶತ್ರು ಇಸ್ರೇಲ್ ಕಾರಣ ಎಂದು ಇರಾನ್‌ನ ನಾಗರಿಕ ಮತ್ತು ಸೇನಾ ನಾಯಕರು ಘೋಷಿಸಿದ್ದಾರೆ.

ವಿಜ್ಞಾನಿಯ ಹತ್ಯೆಯನ್ನು ಖಂಡಿಸಿದ ಯುಎಇ

ಇರಾನ್‌ನ ಉನ್ನತ ಪರಮಾಣು ವಿಜ್ಞಾನಿ ಮೊಹ್ಸಿನ್ ಫಖ್ರಿಝಾದೆಯ ಹತ್ಯೆಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ರವಿವಾರ ಖಂಡಿಸಿದೆ ಹಾಗೂ ಸಂಬಂಧಪಟ್ಟ ಎಲ್ಲ ಪಕ್ಷಗಳು ಸಂಯಮ ಕಾಯ್ದುಕೊಳ್ಳುವಂತೆ ಅದು ಒತ್ತಾಯಿಸಿದೆ.

‘‘ಮೊಹ್ಸಿನ್ ಫಖ್ರಿಝಾದೆಯ ಹತ್ಯೆಯನ್ನು ಯುಎಇ ಖಂಡಿಸುತ್ತದೆ. ವಲಯದ ಅಸ್ಥಿರತೆ ಮತ್ತು ಅಶಾಂತಿ ಹೊಸ ಮಟ್ಟಕ್ಕೆ ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ಸಂಯಮ ವಹಿಸುವಂತೆ ಸಂಬಂಧಪಟ್ಟ ಎಲ್ಲ ಪಕ್ಷಗಳಿಗೆ ಕರೆ ನೀಡುತ್ತದೆ’’ ಎಂದು ಯುಎಇ ವಿದೇಶ ಸಚಿವಾಲಯ ಟ್ವೀಟ್ ಮಾಡಿದೆ.

ಫಖ್ರಿಝಾದೆಯ ಹತ್ಯೆ ‘ಹೀನ ಅಪರಾಧ’ ಎಂಬುದಾಗಿ ಅದು ಬಣ್ಣಿಸಿದೆ.

ವಿಜ್ಞಾನಿ ಹಂತಕರಿಗೆ ಲೆಕ್ಕಾಚಾರದ, ನಿರ್ಣಾಯಕ ಪ್ರತಿಕ್ರಿಯೆ: ಸರ್ವೋಚ್ಛ ನಾಯಕನ ಸಲಹೆಗಾರ

ತನ್ನ ಉನ್ನತ ಪರಮಾಣು ವಿಜ್ಞಾನಿ ಮೊಹ್ಸಿನ್ ಫಖ್ರಿಝಾದೆಯ ಹತ್ಯೆಗೆ ಇರಾನ್ ‘ಲೆಕ್ಕಾಚಾರದ ಹಾಗೂ ನಿರ್ಣಾಯಕ’ ಪ್ರತಿಕ್ರಿಯೆ ನೀಡಲಿದೆ ಎಂದು ದೇಶದ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈಯ ಉನ್ನತ ಸಲಹೆಗಾರ ಕಮಾಲ್ ಖರಾಝಿ ಹೇಳಿದ್ದಾರೆ.

‘‘ನಿಸ್ಸಂಶಯವಾಗಿಯೂ, ನಮ್ಮ ಪರಮಾಣು ವಿಜ್ಞಾನಿಯನ್ನು ಹತ್ಯೆಗೈದ ಕ್ರಿಮಿನಲ್‌ಗಳಿಗೆ ಇರಾನ್ ಲೆಕ್ಕಾಚಾರದ ಮತ್ತು ನಿರ್ಣಾಯಕ ಉತ್ತರವನ್ನು ನೀಡಲಿದೆ’’ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News