ಶ್ರೀಲಂಕಾ ಜೈಲುಗಳಲ್ಲಿ ಕೊರೋನ ಸೋಂಕು ಹೆಚ್ಚಳ; ಕೈದಿಗಳ ದಾಂಧಲೆ: 8 ಸಾವು

Update: 2020-11-30 16:38 GMT

ಕೊಲಂಬೊ (ಶ್ರೀಲಂಕಾ), ನ. 30: ಹೆಚ್ಚೆಚ್ಚು ಕೈದಿಗಳು ಕೊರೋನ ವೈರಸ್ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂಬ ಆಕ್ರೋಶವನ್ನು ವ್ಯಕ್ತಪಡಿಸಿ, ಶ್ರೀಲಂಕಾದ ಅತಿ ಭದ್ರತೆಯ ಜೈಲೊಂದರಲ್ಲಿ ರವಿವಾರ ರಾತ್ರಿ ಕೈದಿಗಳು ದಾಂಧಲೆ ನಡೆಸಿದ್ದು, ಕನಿಷ್ಠ 8 ಕೈದಿಗಳು ಮೃತಪಟ್ಟಿದ್ದಾರೆ ಹಾಗೂ 55 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ.

ರಾಜಧಾನಿ ಕೊಲಂಬೊದ ಹೊರವಲಯದಲ್ಲಿರುವ ಮಹಾರ ಜೈಲನ್ನು ನೂರಾರು ಪೊಲೀಸರು ಸುತ್ತುವರಿದಿದ್ದಾರೆ.

ರವಿವಾರ ಕೈದಿಗಳು ಜೈಲಿನ ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆಗಿಳಿದರು. ಇದಕ್ಕೂ ಮೊದಲು ಅವರು ಜೈಲಿನ ಅಡುಗೆ ಕೋಣೆಗಳಿಗೆ ಬೆಂಕಿ ಕೊಟ್ಟರು ಹಾಗೂ ಇಬ್ಬರು ವಾರ್ಡನ್‌ಗಳನ್ನು ಸ್ವಲ್ಪ ಸಮಯ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡರು ಎಂದು ಪೊಲೀಸರು ಮತ್ತು ನಿವಾಸಿಗಳು ಹೇಳಿದ್ದಾರೆ.

‘‘ಒತ್ತೆಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿದೆ’’ ಎಂದು ಪೊಲೀಸ್ ವಕ್ತಾರ ಅಜಿತ್ ರೋಹಾನ್ ತಿಳಿಸಿದರು. ‘‘ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ’’ ಎಂದರು.

200 ಪೊಲೀಸ್ ಕಮಾಂಡೊಗಳು ಸೇರಿದಂತೆ 600 ಪೊಲೀಸ್ ಸಿಬ್ಬಂದಿಯನ್ನು ಜೈಲು ಆವರಣದ ಸುತ್ತ ನಿಯೋಜಿಸಲಾಗಿದೆ ಎಂದು ಅವರು ನುಡಿದರು.

ಜೈಲಿನಲ್ಲಿ ಕೊರೋನವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಕೈದಿಗಳು ತಮ್ಮ ಕೋಣೆಗಳನ್ನು ಮುರಿದು ಹೊರಬಂದರು ಎಂದು ಪೊಲೀಸರು ಹೇಳಿದ್ದಾರೆ.

ಶ್ರೀಲಂಕಾದ ಜೈಲುಗಳಲ್ಲಿ ಕೊರೋನ ಸೋಂಕು ಪ್ರಕರಣಗಳ ಸಂಖ್ಯೆ ಶನಿವಾರ 1,000ವನ್ನು ಮೀರಿದೆ. ಸಾಂಕ್ರಾಮಿಕಕ್ಕೆ ಇಬ್ಬರು ಕೈದಿಗಳು ಈಗಾಗಲೇ ಬಲಿಯಾಗಿದ್ದಾರೆ. ಈ ವಿಷಯದಲ್ಲಿ ಜೈಲುಗಳಲ್ಲಿ ವಾರಗಳಿಂದ ಅಶಾಂತಿ ನೆಲೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News