9ನೇ ಸುತ್ತಿನ ಮಾತುಕತೆಗೂ ಮುನ್ನ ಚೀನಾದಿಂದ ಕೆಲವು ಸ್ಪಷ್ಟೀಕರಣ ಬಯಸಿದ ಭಾರತ

Update: 2020-11-30 17:07 GMT

ಹೊಸದಿಲ್ಲಿ, ನ.30: ಪೂರ್ವ ಲಡಾಖ್ ವಲಯದಲ್ಲಿ ಈ ಹಿಂದೆ ಇದ್ದ ಪರಿಸ್ಥಿತಿಯನ್ನು ಮತ್ತೆ ನೆಲೆಗೊಳಿಸುವ ನಿಟ್ಟಿನಲ್ಲಿ ಭಾರತ-ಚೀನಾಗಳ ಮಧ್ಯೆ ನಡೆಯಲಿರುವ 9ನೇ ಸುತ್ತಿನ ಮಾತುಕತೆಗೂ ಮುನ್ನ, ಸೇನೆ ವಾಪಸಾತಿ ಮತ್ತು ಉದ್ವಿಗ್ನತೆ ಶಮನಗೊಳಿಸುವ ಮಾರ್ಗಸೂಚಿಯ ಬಗ್ಗೆ ಚೀನಾದಿಂದ ಕೆಲವು ಸ್ಪಷ್ಟೀಕರಣವನ್ನು ಭಾರತ ಬಯಸುತ್ತಿದೆ ಎಂದು ವರದಿ ತಿಳಿಸಿದೆ.

ಲಡಾಖ್‌ನ ಪರ್ವತಪ್ರದೇಶಗಳಲ್ಲಿ ಮತ್ತು ಟಿಬೆಟ್ ಪ್ರಸ್ಥಭೂಮಿಯಲ್ಲಿ ಡಿಸೆಂಬರ್ ನಂತರ ಭಾರೀ ಹಿಮಪಾತ, ತೀವ್ರ ಚಳಿ ಹಾಗೂ ತಾಪಮಾನ ಶೂನ್ಯ ಡಿಗ್ರಿಗಿಂತಲೂ ಕೆಳಕ್ಕೆ ಇಳಿಯುವುದರಿಂದ ಸೇನೆ ವಾಪಸಾತಿಗೆ ಇರುವ ಅವಕಾಶ ಡಿಸೆಂಬರ್‌ಗೆ ಅಂತ್ಯವಾಗಲಿದೆ. ಆ ಬಳಿಕ ಸೇನಾ ವಾಹನ ಮತ್ತು ಸೈನಿಕರ ಸಂಚಾರ ಬಹುತೇಕ ಅಸಾಧ್ಯವಾಗಿದೆ ಎಂದು ಮಿಲಿಟರಿ ಮತ್ತು ರಾಜತಾಂತ್ರಿಕ ಅಧಿಕಾರಿಗಳು ಹೇಳಿದ್ದಾರೆ.

ಸ್ಪಷ್ಟೀಕರಣ ಉಭಯ ದೇಶಗಳಿಗೂ ತೃಪ್ತಿಕರವಾಗಿದ್ದಲ್ಲಿ ಸೇನೆ ಹಿಂದೆಗೆತ ಮತ್ತು ಉದ್ವಿಗ್ನತೆ ಶಮನದ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಲಿಖಿತ ಒಪ್ಪಂದದಲ್ಲಿ ವಿವರಿಸಲಾಗುವುದು. ಭಾರತ ಕೇಳಿರುವ ಸ್ಪಷ್ಟೀಕರಣ ಒಪ್ಪಂದಕ್ಕೆ ಎದುರಾಗಿರುವ ಅಡ್ಡಿಯನ್ನು ನಿವಾರಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೂರ್ವ ಲಡಾಖ್‌ನಲ್ಲಿ ಭಾರೀ ಹಿಮಪಾತ ಆರಂಭವಾಗಿದ್ದು ತಾಪಮಾನ ಈಗಾಗಲೇ ಮೈನಸ್ ಡಿಗ್ರಿಗಿಂತ ಕೆಳಗಿಳಿದಿದೆ. ಡಿಸೆಂಬರ್‌ನಲ್ಲಿ ಇದು ಮತ್ತಷ್ಟು ಕಡಿಮೆಯಾಗುತ್ತದೆ. ಈ ಕಾರಣದಿಂದ ರೆಜಿಲ ಕಣಿವೆಯ ರಸ್ತೆಯನ್ನು ಡಿಸೆಂಬರ್ 31ರವರೆಗೆ ಸಂಚಾರಕ್ಕೆ ಮುಕ್ತವಾಗಿಸುವ ಕಠಿಣ ಸವಾಲು ಬಾರ್ಡರ್ ರೋಡ್ಸ್ ಆರ್ಗನೈಸೇಷನ್(ಬಿಆರ್‌ಒ)ದ ಎದುರಿಗಿದೆ. ಲಡಾಖ್‌ನ ದಕ್ಷಿಣ ಪಾಂಗ್ಯಾಂಗ್ ತ್ಸೊ ಪ್ರದೇಶದಿಂದ ಭಾರತದ ಸೇನೆ ಮೊದಲು ಹಿಂದಕ್ಕೆ ಸರಿಯಬೇಕು ಎಂಬುದು ಚೀನಾ ಸೇನೆಯ ಆಗ್ರಹವಾಗಿದೆ. ಆದರೆ ಚೀನಾದ ಸೇನೆ ಈ ಪ್ರದೇಶದ ಮುಂಚೂಣಿ ನೆಲೆಯಿಂದ ಹಿಂದಕ್ಕೆ ಸರಿದರೆ ಮಾತ್ರ ತನ್ನ ಸೇನೆ ಹಿಂದಕ್ಕೆ ಸರಿಯುವುದಾಗಿ ಭಾರತ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News