ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಖಚಿತ ಪಡಿಸಲು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದ ಸೂಚನೆ

Update: 2020-11-30 17:09 GMT

ಹೊಸದಿಲ್ಲಿ, ನ.30: ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳಲ್ಲಿ ಸೂಕ್ತ ಅಗ್ನಿ ಸುರಕ್ಷತಾ ಕ್ರಮಗಳನ್ನು ಖಚಿತ ಪಡಿಸಿಕೊಳ್ಳುವಂತೆ ಕೇಂದ್ರ ಸರಕಾರವು ಸೋಮವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ದೇಶವು ಕೊರೋನ ವೈರಸ್ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವ ಈ ಸಮಯದಲ್ಲಿ ಗರಿಷ್ಠ ಮುನ್ನೆಚ್ಚರಿಕೆಗಳು ಅಗತ್ಯವಾಗಿವೆ ಎಂದು ಅದು ಹೇಳಿದೆ.

ಗುಜರಾತಿನ ಎರಡು ಆಸ್ಪತ್ರೆಗಳಲ್ಲಿ ಇತ್ತೀಚಿನ ಅಗ್ನಿ ದುರಂತಗಳ ಹಿನ್ನಲೆಯಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿರುವ ಕೇಂದ್ರ ಗೃಹ ಕಾರ್ಯದರ್ಶಿ ಅಜಯಕುಮಾರ ಭಲ್ಲಾ ಅವರು,ಇತ್ತೀಚಿನ ದಿನಗಳಲ್ಲಿ ಸಂಭವಿಸಿರುವ ಇಂತಹ ಅಗ್ನಿ ಅವಘಡಗಳು ಮತ್ತು ಅಧಿಕಾರಿಗಳು ತಮ್ಮ ವ್ಯಾಪ್ತಿ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳ ಪಾಲನೆಯನ್ನು ಕಡೆಗಣಿಸಿರುವುದು ಕಳವಳದ ವಿಷಯವಾಗಿದೆ ಎಂದು ಹೇಳಿದ್ದಾರೆ. ರಾಜಕೋಟ್‌ನ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಆರು ಕೊರೋನ ವೈರಸ್ ರೋಗಿಗಳು ಮೃತಪಟ್ಟಿದ್ದರೆ,ಅಹ್ಮದಾಬಾದ್ ಆಸ್ಪತ್ರೆಯಲ್ಲಿ ಅಗ್ನಿ ದುರಂತದಲ್ಲಿ ಎಂಟು ಜನರು ಬಲಿಯಾಗಿದ್ದರು.

ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳು ಸೇರಿದಂತೆ ಎಲ್ಲ ಕಟ್ಟಡಗಳಲ್ಲಿ ಸೂಕ್ತ ಅಗ್ನಿ ಸುರಕ್ಷತೆ ಕ್ರಮಗಳನ್ನು ಖಚಿತಪಡಿಸಿಕೊಳ್ಳಲು ಅಗ್ನಿ ಸುರಕ್ಷತೆ ಮಾರ್ಗಸೂಚಿಗಳನ್ನು ಹೊರಡಿಸಲು ಅನುಕೂಲವಾಗುವಂತೆ ಗೃಹ ಸಚಿವಾಲಯದಲ್ಲಿಯ ಮಹಾ ನಿರ್ದೇಶನಾಲಯವು (ಅಗ್ನಿಶಾಮಕ ಸೇವೆಗಳು,ನಾಗರಿಕ ರಕ್ಷಣೆ ಮತ್ತು ಗೃಹರಕ್ಷಕರು) ಆಗಾಗ್ಗೆ ರಾಜ್ಯಗಳಿಗೆ ಅಗತ್ಯ ಸಲಹೆಗಳನ್ನು ಹೊರಡಿಸುತ್ತದೆ. ಕೇಂದ್ರದ ಸಲಹಾಸೂಚಿಯನ್ನು ಪಾಲಿಸುವಂತೆ ಮತ್ತು ಎಲ್ಲ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳಲ್ಲಿ ತಕ್ಷಣ ಮರು ತಪಾಸಣೆಗಳನ್ನು ನಡೆಸಿ ಅಗ್ನಿ ಸುರಕ್ಷತೆ ಮತ್ತು ಭವಿಷ್ಯದಲ್ಲಿ ಇಂತಹ ಅವಘಡಗಳುಂಟಾದಾಗ ಪಾರಾಗುವ ಮಾರ್ಗಗಳ ಬಗ್ಗೆ ಪುನರ್‌ಪರಿಶೀಲಿಸಲು ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶ ನೀಡುವಂತೆ ಭಲ್ಲಾ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಕ್ರಮಪಾಲನಾ ವರದಿಗಳನ್ನು ಶೀಘ್ರವೇ ಸಚಿವಾಲಯಕ್ಕೆ ಸಲ್ಲಿಸುವಂತೆಯೂ ಅವರು ಪತ್ರದಲ್ಲಿ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News