ಉಳ್ಳಾಲ: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮೀನುಗಾರರು ನಾಪತ್ತೆ

Update: 2020-12-01 06:50 GMT

ಮಂಗಳೂರು, ಡಿ.1: ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೃಹತ್ ಬೋಟ್‌ವೊಂದು ಕಡಲಲ್ಲಿ ಮುಳುಗಡೆಯಾಗಿದ್ದು, ಆರು ಮಂದಿ ನಾಪತ್ತೆಯಾದ ಘಟನೆ ಉಳ್ಳಾಲದ ಪಶ್ಚಿಮ ಭಾಗದ ಕೆಲವು ನಾಟಿಕಲ್‌ ಮೈಲಿ ದೂರದಲ್ಲಿ ನಡೆದಿದೆ.

ಬೋಳಾರದ ಪ್ರಶಾಂತ ಎಂಬವರ ಮಾಲಕತ್ವದ "ಶ್ರೀರಕ್ಷಾ" ಹೆಸರಿನ ಬೋಟು ಸೋಮವಾರ ನಸುಕಿನಜಾವ ಮೀನುಗಾರಿಕೆಗೆ ತೆರಳಿತ್ತು.‌ ಬೋಟ್‌ನಲ್ಲಿ 25 ಮಂದಿ ಮೀನುಗಾರರು ತೆರಳಿದ್ದರು. ಕಡಲಲ್ಲಿ‌ ಭಾರೀ ಪ್ರಮಾಣದ ಮೀನು ಸಿಕ್ಕಿದ್ದು, ಸಂಜೆ 6:30ರ ಸುಮಾರಿಗೆ ಬಲೆಯನ್ನು ಮೇಲೆ‌‌ ಎಳೆಯುವಾಗ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.  ಬೋಟ್ ನಲ್ಲಿ ಉಳ್ಳಾಲ, ಮಂಗಳೂರು ಹಾಗೂ ತಮಿಳುನಾಡು ಮೂಲದ ಮೀನುಗಾರರು ಇದ್ದರು ಎನ್ನುವ ಮಾಹಿತಿ ಲಭಿಸಿದೆ.

ಪರ್ಸಿನ್ ಬೃಹತ್ ಬೋಟು ಸ್ಟೀಲ್‌ ನಿಂದ ಕೂಡಿದ್ದರಿಂದ ಸಮುದ್ರದಲ್ಲಿ ಮಗುಚಿದೆ. 25 ಮೀನುಗಾರರ ಪೈಕಿ 19 ಮಂದಿ ದಡ ಸೇರಿದ್ದಾರೆ. ಉಳಿದ ಆರು ಮೀನುಗಾರರು ಬಲೆಯಲ್ಲೇ ಸಿಕ್ಕಿಕೊಂಡಿರುವ ಸಾಧ್ಯತೆ ಇದೆ ಎಂದು ಮೀನುಗಾರ ಮುಖಂಡ ನಿತಿನ್‌ಕುಮಾರ್ "ವಾರ್ತಾಭಾರತಿ" ಗೆ ತಿಳಿಸಿದ್ದಾರೆ.

ನಾಪತ್ತೆಯಾದ ಮೀನುಗಾರರ ರಕ್ಷಣೆಗೆ ಮಂಗಳವಾರ ಹಲವು ಬೋಟುಗಳು ಅವಘಡ ಸಂಭವಿಸಿದ ಸ್ಥಳಕ್ಕೆ‌ ತಲುಪಿವೆ. ಮೀನುಗಾರರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News