ಉಡುಪಿ ಶ್ರೀಕೃಷ್ಣ ಮಠದ ನಾಮಫಲಕದಲ್ಲಿ ಕನ್ನಡ ಭಾಷೆ ನಿರ್ಲಕ್ಷ: ಉಡುಪಿ ಜಿಲ್ಲಾ ಕಸಾಪ ತೀವ್ರ ಖಂಡನೆ

Update: 2020-12-01 06:29 GMT

ಉಡುಪಿ, ಡಿ.1: ಉಡುಪಿ ಶ್ರೀ ಕೃಷ್ಣ ಮಠದ ಮುಖದ್ವಾರದ ನಾಮಫಲಕದಲ್ಲಿ ಕನ್ನಡ ಭಾಷೆಯನ್ನು ತೆಗೆದು ಹಾಕಿರುವ ಕ್ರಮವನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತೀವ್ರವಾಗಿ ಖಂಡಿಸಿದೆ.

ನಾಮಫಲಕದಲ್ಲಿ ಕನ್ನಡ ಭಾಷೆಯನ್ನು ತೆಗೆದು ಹಾಕಿರುವುದು ಸರಿಯಾದ ಕ್ರಮವಲ್ಲ. ಕನ್ನಡ ನಾಡಿನಲ್ಲಿ ಮೊದಲು ಕನ್ನಡಕ್ಕೆ ಆದ್ಯತೆ ನೀಡಬೇಕು. ನಾಮ ಫಲಕದಲ್ಲಿ ಮೊದಲು ಕನ್ನಡ ಇರಬೇಕು. ಆನಂತರ ಇತರ ಭಾಷೆಗಳು. ಒಂದು ಧಾರ್ಮಿಕ ಸಂಸ್ಥೆಯು ಭಾಷೆಗಳ ನಡುವೆ ಕಂದಕ ಸೃಷ್ಟಿಸುವುದು ಸರಿಯಲ್ಲ ಎಂದು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ನಾಮಫಲಕದ ಈ ಪ್ರಕರಣ ಸರಕಾರದ ಕಾನೂನಿನ ಸ್ವಷ್ಟ ಉಲ್ಲಂಘನೆಯಾಗಿದೆ. ಇದನ್ನು ಕೂಡಲೇ ಸರಿಪಡಿಸಬೇಕು. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಮುಂದೆ ಇದನ್ನು ಸರಿಪಡಿಸುವವರೆಗೆ ಹೋರಾಟ ಮಾಡಲಾಗುವುದು. ಸಮಾಜಕ್ಕೆ ಮಾರ್ಗದರ್ಶನ ಮಾಡುವವರೇ ಇಂತಹ ಕುಚೋದ್ಯ ಕೆಲಸಕ್ಕೆ ಕೈಹಾಕಿರುವುದು ಕ್ಷಮಿಸಲಾಗದ ಅಪರಾಧ ಎಂದು ಅವರು ತೀವ್ರವಾಗಿ ಖಂಡಿಸಿದ್ದಾರೆ.

ಸಂಬಂಧಪಟ್ಟವರು ತಕ್ಷಣ ಇದನ್ನು ಸರಿಪಡಿಸಬೇಕು. ಇದು ಕನ್ನಡ ಸಾಹಿತ್ಯ ಪರಿಷತ್‌ನ ಹಕ್ಕೊತ್ತಾಯವಾಗಿದೆ. ನಾಮಫಲಕದಲ್ಲಿ ಕನ್ನಡ ಭಾಷೆ ತೆಗೆದು ತುಳು ಭಾಷೆ ಹಾಕಿದ್ದು ಸರಿಯಲ್ಲ. ಬೇರೆ ಭಾಷೆಯನ್ನು ಬೆಳೆಸುವಾಗ ಮೊದಲು ಕನ್ನಡವನ್ನೆ ಬಳಸಬೇಕು. ಕನ್ನಡ ಭಾಷೆಯನ್ನು ಕೈಬಿಟ್ಟು ಬೇರೆ ಭಾಷೆಯನ್ನು ಬಳಸಿದ್ದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಕನ್ನಡ ಮತ್ತು ಸೋದರ ಭಾಷೆ ತುಳುವಿನ ನಡುವೆ ಕಂದಕ ನಿರ್ಮಾಣ ಮಾಡುವ ಕ್ರಮವನ್ನು ಕೂಡ ಖಂಡಿಸುತ್ತೇವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠದಿಂದ ಸ್ಪಷ್ಟನೆ
ಮಠದ ಪುನಶ್ಚೇತನಗೊಳಿಸುವ ಸಂದರ್ಭದಲ್ಲಿ ಸ್ವಾಮೀಜಿ ಅಭಿಮತದಂತೆ ಪ್ಲಾಸ್ಟಿಕ್‌ನಲ್ಲಿದ್ದ ಮುಖದ್ವಾರದ ಬೋರ್ಡಿನ ಬದಲು ಮರದ ಬೋರ್ಡ್ ಹಾಕುವ ಯೋಜನೆ ಹಾಕಿಕೊಳ್ಳಲಾಗಿತ್ತು. ಅದರಲ್ಲಿ ಮೊದಲು ಕನ್ನಡ, ನಂತರ ಸಂಸ್ಕೃತ ಮತ್ತು ತುಳು ಲಿಪಿ ಬೋರ್ಡ್‌ಗಳನ್ನು ಹಾಕಲು ಉದ್ದೇಶಿಸಲಾಗಿತ್ತು. ಬೋರ್ಡ್ ತಯಾರು ಮಾಡುವ ಸಂದರ್ಭ ಲಕ್ಷದೀಪ ಬಂದ ಕಾರಣ ಕನ್ನಡ ಬೋರ್ಡ್ ಸಿದ್ಧವಾಗಲು ವಿಳಂಬವಾಗಿದೆ. ಆದುದರಿಂದ ಈಗಾಗಲೇ ತಯಾರಾದ ಸಂಸ್ಕೃತ ಮತ್ತು ತುಳು ಭಾಷೆಯ ಬೋರ್ಡ್‌ಗಳನ್ನು ಅಳವಡಿಸಲಾಗಿದೆ. ಮುಂದೆ ಕನ್ನಡ ಭಾಷೆಯ ಬೋರ್ಡ್‌ನ್ನು ಕೂಡ ಅಳವಡಿಸಲಾಗುವುದು ಎಂದು ಪರ್ಯಾಯ ಅದಮಾರು ಮಠದ ವ್ಯವಸ್ಥಾಪಕ ಗೋವಿಂದರಾಜ್ ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News