ಪುತ್ತೂರು: ಗಾಂಜಾ ಸಾಗಾಟ ಪತ್ತೆ; ನಾಲ್ವರು ಆರೋಪಿಗಳ ಬಂಧನ

Update: 2020-12-01 12:10 GMT

ಪುತ್ತೂರು, ಡಿ.1: ಅಕ್ರಮ ಗಾಂಜಾ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ಸೋಮವಾರ ತಡರಾತ್ರಿ ಬಂಧಿಸಿದ್ದಾರೆ.

ಕೇರಳ ರಾಜ್ಯದ ಪೈವಳಿಕೆ ಗ್ರಾಮದ ಮಂಜೇಶ್ವರ ನಿವಾಸಿ ಮಹಮ್ಮದ್ ಅರ್ಷದ್(26), ಮಂಗಲ್ಪಾಡಿ ಗ್ರಾಮದ ಉಪ್ಪಳ ನಿವಾಸಿ ರಿಯಾಝ್(27), ಪುತ್ತೂರು ತಾಲೂಕಿನ ಕಬಕ ನಿವಾಸಿ ಅಬ್ದುಲ್ ಖಾದರ್ ಜಾಬಿರ್(23) ಮತ್ತು ಬನ್ನೂರು ನಿವಾಸಿ ಅಬ್ದುಲ್ ನಝೀರ್(37) ಬಂಧಿತ ಆರೋಪಿಗಳು.

ಇವರನ್ನು ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ನೈತಾಡಿ ಎಂಬಲ್ಲಿ ಬಂಧಿಸಲಾಗಿದ್ದು, ಗಾಂಜಾ ಸಹಿತ ಸುಮಾರು ರೂ. 5 ಲಕ್ಷದ ಸೊತ್ತುಗಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಕೇರಳ ಕಡೆಯಿಂದ ಪುತ್ತೂರು ಹಾಗೂ ಸುಳ್ಯ ಮುಂತಾದ ಕಡೆಗಳಿಗೆ ಗಾಂಜಾವನ್ನು ಮಾರಾಟ ಮಾಡಲು 2 ಕಾರುಗಳಲ್ಲಿ ಸಾಗಿಸುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಖಚಿತ ವರ್ತಮಾನ ಪಡೆದ ಪುತ್ತೂರು ನಗರ ಠಾಣೆಯ ಉಪನಿರೀಕ್ಷಕ ಜಂಬೂರಾಜ್ ಮಹಾಜನ್ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ, ಆರೋಪಿಗಳಿಂದ 1.25 ಲಕ್ಷ ರೂ. ಮೌಲ್ಯದ 6 ಕೆಜಿ 360 ಗ್ರಾಂ ಗಾಂಜಾ, ಐದು ಮೊಬೈಲ್‌ ಫೋನ್‌ಗಳು ಮತ್ತು ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News